ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅಸ್ತಂಗತ

ಮಂಗಳವಾರ, 27 ಜನವರಿ 2015 (09:13 IST)
ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಸೋಮವಾರ ಸಂಜೆ ನಿಧನರಾಗಿದ್ದಾರೆ. ಹಲವು ದಿನಗಳಿಂದ ತೀವೃ ಅನಾರೋಗ್ಯದಿಂದ ನರಳುತ್ತಿದ್ದ 94 ವರ್ಷದ ಆರ್.ಕೆ.ಲಕ್ಷ್ಮಣ್ ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಪ್ರಾಣ ತ್ಯಜಿಸಿದ್ದಾರೆ. ಅವರು ಖ್ಯಾತ ಕಥೆಗಾರ ಆರ್.ಕೆ.ನಾರಾಯಣ್ ಅವರ ಹಿರಿಯ ಸಹೋದರರಾಗಿದ್ದಾರೆ. ಭಾರತದಲ್ಲಿ ಕಾರ್ಟೂನುಗಳಿಗೆ ಒಂದು ಹೊಸ ಆಯಾಮವನ್ನೇ ಕೊಟ್ಟ ಖ್ಯಾತಿ ಇವರಿಗೆ ಸಲ್ಲಬೇಕು.
 
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಜರ್ಜರಿತವನ್ನಾಗಿಸಿತ್ತು. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಈ ತಿಂಗಳ 17ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಜೆಯಿಂದ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಮತ್ತೆ ಅವರು ಚೇತರಿಸಿಕೊಳ್ಳಲೇ ಇಲ್ಲ. 
 
ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ಲಕ್ಷ್ಮಣ್ 1921 ಅಕ್ಟೋಬರ್ 21ರಂದು ಮೈಸೂರಿನಲ್ಲಿ ಜನಿಸಿದ್ದರು.  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ  ವ್ಯಂಗ್ಯ ಚಿತ್ರಗಳು ಅವರನ್ನು ವಿಶ್ವ ಪ್ರಸಿದ್ಧರನ್ನಾಗಿಸುವಂತೆ ಮಾಡಿದವು. ಪದ್ಮಭೂಷಣ, ಪದ್ಮವಿಭೂಷಣ, ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭ್ಯವಾಗಿದ್ದವು. 
 
ಅವರ ಅಂತ್ಯಕ್ರಿಯೆ ಇಂದು ಸಂಜೆ ಪುಣೆಯಲ್ಲಿ ನಡೆಯಲಿದ್ದು, ಸಕಲ ಸರ್ಕಾರಿ ಮರ್ಯಾದೆ, ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಲು ಮಹಾರಾಷ್ಟ್ರ ಸರಕಾರ ತೀರ್ಮಾನಿಸಿದೆ. ಗಣ್ಯಾತಿಗಣ್ಯರು ಅವರ ಅಂತಿಮ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ