ವಿಮಾನದಲ್ಲಿ ವಿಕಿರಣ ಸೋರಿಕೆ: ತುರ್ತು ಭೂಸ್ಪರ್ಶ

ಶುಕ್ರವಾರ, 29 ಮೇ 2015 (15:26 IST)
ವಿಮಾನದಲ್ಲಿ ತರಲಾಗುತ್ತಿದ್ದ ಮೆಡಿಕಲ್ ಕಿಟ್‌ನಿಂದ ರೇಡಿಯೋ ವಿಕಿರಣಗಳು ಸೋರಿಕೆಯಾದ ಕಾರಣ ಟರ್ಕಿಶ್ ಏರಲೈನ್ಸ್‌ನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ವಿಕಿರಣ ಸೋರಿಕೆಯಿಂದ ವಿಮಾನದಲ್ಲಿದ್ದ ಇಬ್ಬರು ಅಸ್ವಸ್ಥರಾಗಿದ್ದು ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 
ಮೆಡಿಕಲ್ ಕಿಟ್ 10 ಪ್ಯಾಕೇಟ್‌ಗಳನ್ನು ಹೊಂದಿತ್ತು. ಅದರಲ್ಲಿ ಎರಡು ಪ್ಯಾಕೇಟ್‌ಗಳಲ್ಲಿ ವಿಕಿರಣ ಸೋರಿಕೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಎನ್‌ಡಿಆರ್‌ಎಫ್ ತಂಡ ಪರಿಶೀಲನೆ ನಡೆಸುತ್ತಿದೆ. 
 
ಈ ವಿಮಾನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು ಹೊತ್ತೊಯ್ಯುತ್ತಿತ್ತು. ಟರ್ಕಿಯಿಂದ ಬಂದಿದ್ದ ವಿಮಾನದಲ್ಲಿ  ಫೋರ್ಟಿಸ್ ಆಸ್ಪತ್ರೆಗೆಂದು ಮೆಡಿಕಲ್ ಕಿಟ್‌ಗಳನ್ನು ತರಿಸಲಾಗಿತ್ತು.
 
ಮೆಡಿಕಲ್ ಕಿಟ್‌ನಲ್ಲಿ ಸೋಡಿಯಂ ಅಯೋಡಿನ್ ಸೊಲ್ಯುಶನ್ ರಾಸಾಯನಿಕ ಇತ್ತೆಂದು ಹೇಳಲಾಗುತ್ತದೆ. ಕಿಟ್‍ನಲ್ಲಿ ವಿಕಿರಣಗಳ ಸೋರಿಕೆಯಾಗಿದ್ದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿತ್ತು.
 
ವಿಮಾನದಲ್ಲಿ ಆಗುತ್ತಿದ್ದ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದ್ದು ನಿಲ್ದಾಣದಲ್ಲಿದ್ದವರಿಗೆ ನಿರಾತಂಕ ತರಿಸಿದೆ. 

ವೆಬ್ದುನಿಯಾವನ್ನು ಓದಿ