ಜಾರ್ಖಂಡ್‌: ಪ್ರಥಮ ಬುಡಕಟ್ಟೇತರ ಸಿಎಂ ಆಗಿ ರಘುಬರ್ ದಾಸ್ ಪ್ರಮಾಣ ವಚನ

ಭಾನುವಾರ, 28 ಡಿಸೆಂಬರ್ 2014 (14:46 IST)
ಬಿಜೆಪಿ ನಾಯಕ ರಘುಬರ್ ದಾಸ್ ಭಾನುವಾರ ಜಾರ್ಖಂಡ್‌ನ 10 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ದಾಸ್ ರಾಜ್ಯದ ಮೊದಲ ಬುಡಕಟ್ಟೇತರ ಸಿಎಂ ಎನಿಸಿದ್ದಾರೆ. 
ಬಿರಸಾ ಮುಂಡಾ ಫುಟ್ಬಾಲ್ ಮೈದಾನದಲ್ಲಿ ಇಂದು ಮುಂಜಾನೆ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಸಯದ್ ಅಹ್ಮದ್ ನೂತನ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸಿದರು. ಪೂರ್ವ ಜೇಮಶೇಡ್‌ಪುರದಿಂದ ಒಟ್ಟು 5 ಬಾರಿ ದಾಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. 
 
ಇದೇ ವೇಳೆ  ಬಿಜೆಪಿಯ ನೀಲಕಂಠ ಸಿಂಗ್ ಮುಂಡಾ,ಸಿ.ಪಿ. ಸಿಂಗ್, ಲೂಯಿಸ್ ಮರಾಂಡಿ ಮತ್ತು ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ಪಕ್ಷದ ಶಾಸಕ ಚಂದ್ರಪ್ರಕಾಶ್ ಚೌಧರಿಯವರು ಸಹ ಸಂಪುಟ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸೇರಿ ರಾಜ್ಯದಲ್ಲಿ ಕೇವಲ 12 ಮಂದಿಯಷ್ಟೇ ಸಂಪುಟ ಸದಸ್ಯರಾಗಬಹುದು. ಈಗಾಗಲೇ 5 ಜನ ಸಚಿವ ಸ್ಥಾನ ಪಡೆದಿದ್ದಾರೆ. ಮತ್ತೆ 7 ಮಂದಿ ಶಾಸಕರಿಗಷ್ಟೇ  ಸಂಪುಟದಲ್ಲಿ ಅವಕಾಶವಿದೆ.
 
ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣದಿಂದ  ಪ್ರಧಾನಿ ನರೇಂದ್ರ ಮೋದಿ ಕಾರಣ ಸಮಾರಂಭಕ್ಕೆ ಹಾಜರಾಗಲಿಲ್ಲ.ಪ್ರತಿಕೂಲ ಹವಾಮಾನದ ಕಾರಣದಿಂದ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಗೈರು ಹಾಜರಾಗಿದ್ದರು. 
 
ಕಳೆದ ಆಗಸ್ಟ್ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ದಾಸ್, ಎರಡು ಬಾರಿ ಜಾರ್ಖಂಡ್ ಬಿಜೆಪಿ ಅಧ್ಯಕ್ಷರಾಗಿದ್ದರು. 2009ರಲ್ಲಿ ಶಿಬು ಸೊರೇನ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಬಾಬುಲಾಲ್ ಮರಾಂಡಿ ಮತ್ತು ಅರ್ಜುನ್ ಮುಂಡಾ ಸರ್ಕಾರದ ಅವಧಿಯಲ್ಲೂ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಹಣಕಾಸು, ಕಾರ್ಮಿಕ ಖಾತೆ ಮತ್ತು ನಗರಾಭಿವೃದ್ಧಿ ಖಾತೆಗಳನ್ನೂ ನಿರ್ವಹಿಸಿದ ಅನುಭವ ಅವರಿಗಿದೆ. 
 
ಛತ್ತೀಸ್‌ಗಡ್ ಮುಖ್ಯಮಂತ್ರಿ ರಮಣ್ ಸಿಂಗ್ , ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಎಂ ವೆಂಕಯ್ಯ ನಾಯ್ಡು ಮತ್ತು ನಿತಿನ್ ಗಡ್ಕರಿ  ಸಮಾರಂಭದಲ್ಲಿ ಉಪಸ್ಥತರಿದ್ದರು.
 
81 ಸದಸ್ಯರ ಮನೆಯಲ್ಲಿ ಬಿಜೆಪಿ ಮತ್ತು ಎಜೆಎಸ್‌ಯು ಸರಳ ಬಹುಮತ ಸಾಧಿಸಿವೆ. ಎಜೆಎಸ್‌ಯು ಐದು ಸ್ಥಾನಗಳನ್ನು ಗೆದ್ದರೆ ಬಿಜೆಪಿ 37 ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ವೆಬ್ದುನಿಯಾವನ್ನು ಓದಿ