ಪ್ರಧಾನಿ ಮೋದಿ ಟೀಕಿಸಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಬುಧವಾರ, 10 ಫೆಬ್ರವರಿ 2016 (21:28 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪ್ರಧಾನಿ ಮೋದಿ ಕರ್ತವ್ಯದ ಮೇಲೆ ನಂಬಿಕೆಯಿಡುತ್ತಾರೆ. ಕಾಂಗ್ರೆಸ್‌ನಂತೆ ದೇಶ ವಿಭಜಿಸುವುದರಲ್ಲಿ ಅಲ್ಲ ಎಂದು ತಿರುಗೇಟು ನೀಡಿದೆ. 
 
ಕೇರಳದಲ್ಲಿ ಎಡಪಕ್ಷಗಳನ್ನು ಟೀಕಿಸುವ ರಾಹುಲ್, ಪಶ್ಚಿಮ ಬಂಗಾಳದಲ್ಲಿ ಅದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ದವಾಗುತ್ತಾರೆ. ಇಂತಹ ದಂದ್ವ ನೀತಿ ಯಾಕೆ ಎಂದು ಪ್ರಶ್ನಿಸಿದರು.
 
ಬಡವರೊಂದಿಗೆ ಕೇವಲ ಫೋಟೋಗಳನ್ನು ತೆಗೆದುಕೊಂಡಲ್ಲಿ ಅಥವಾ ಅವರ ಜೊತೆ ಊಟ ಮಾಡಿದಲ್ಲಿ ನೆರವಾದಂತೆ ಆಗುವುದಿಲ್ಲ.ಆದರೆ, ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನೆರವಾಗಬಹುದು ಎಂದು ಮೋದಿ ಭಾವಿಸಿದ್ದಾರೆ. ಮೋದಿಯವರಂತೆ ನೀವು ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಕಾರ್ಯದರ್ಶಿ ಸಿದ್ಧಾರ್ಥ ನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
 
ರಾಹುಲ್ ಗಾಂಧಿ ಕೇರಳಕ್ಕೆ ತೆರಳಿದಾಗ ಅಲ್ಲಿನ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಬಗ್ಗೆ ಯಾಕೆ ಮೌನವಾಗಿರುತ್ತಾರೆ ಎಂದು ಪ್ರಶ್ನಿಸಿದ ಸಿಂಗ್, ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
 
ಪ್ರಧಾನಿ ಮೋದಿ ಆರೆಸ್ಸೆಸ್‌ನೊಂದಿಗೆ ಸೇರಿಕೊಂಡು ಚುನಾವಣೆ ಸಂದರ್ಭದಲ್ಲಿ ಹಿಂದು, ಮುಸ್ಲಿಮರನ್ನು ವಿಭಜಿಸಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ