ಸಂಸತ್ತಿನಿಂದ ಎಲ್ಲಾ ವಿಪಕ್ಷಗಳನ್ನು ಹೊರಹಾಕಿ ಕಲಾಪ ನಡೆಸಿ: ಮೋದಿಗೆ ರಾಹುಲ್ ಸಲಹೆ

ಮಂಗಳವಾರ, 4 ಆಗಸ್ಟ್ 2015 (17:07 IST)
ನಮ್ಮ ಪಕ್ಷದ ಎಲ್ಲ ಸಂಸದರನ್ನು ಸಂಸತ್ತಿನಿಂದ ಹೊರ ಹಾಕಿದರೂ ನಾವು ನಮ್ಮ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿ ನೇತೃತ್ವದ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ತಮ್ಮ ಪಕ್ಷದ 25 ಸಂಸದರನ್ನು ಅಮಾನತು ಮಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ನಡೆಯನ್ನು ಖಂಡಿಸಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಕೈ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
"ಸಂಸತ್‌ನ್ನು ಸಮರ್ಪಕವಾಗಿ ವಿರ್ವಹಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಸರಕಾರ ಸಂಸದರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ", ಎಂದು ಸೋನಿಯಾ ಗುಡುಗಿದ್ದಾರೆ. 
 
"ಧೈರ್ಯವಿದ್ದರೆ ನಮ್ಮ ಪಕ್ಷದ ಎಲ್ಲ ಸಂಸದರನ್ನು ಅಮಾನತು ಮಾಡಿ", ಎಂದು ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಮೋದಿ ಸರಕಾರಕ್ಕೆ ಸವಾಲೆಸೆದಿದ್ದಾರೆ. 
 
"ನಮ್ಮನ್ನೆಲ್ಲ ಅವರು ಸಂಸತ್ತಿನಿಂದ ಹೊರದಬ್ಬಿದರೂ ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ", ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
 
"ಮೋದಿಯವರು ತಮ್ಮ ಮನಸ್ಸಿನ ಮಾತುಗಳನ್ನು ಹೇಳುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಅವರು ಮೊದಲು ಹಿಂದೂಸ್ತಾನದ ಮನದ ಮಾತುಗಳನ್ನು ಆಲಿಸಬೇಕು", ಎಂದು ರಾಹುಲ್ ಸಲಹೆ ನೀಡಿದ್ದಾರೆ. 
 
"ವ್ಯಾಪಮ್ ಹಗರಣ 1,000 ಜನರ ಬದುಕನ್ನು ಹಾಳುಗೆಡವಿದೆ. ಸುಷ್ಮಾ ಸ್ವರಾಜ್ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ.  ರಾಜಸ್ಥಾನದ ಮುಖ್ಯಮಂತ್ರಿ ಲಲಿತ್ ಮೋದಿಯವರ ಜತೆ ವ್ಯವಹಾರಿಕ ಸಂಬಂಧವನ್ನು ಹೊಂದಿದ್ದಾರೆ. ಸುಷ್ಮಾ, ರಾಜೆ, ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ಕೇಳುತ್ತಿರುವುದು ನಾನು ಅಲ್ಲ, ಕಾಂಗ್ರೆಸ್ ಸಹ ಅಲ್ಲ. ಭಾರತದ ನಾಗರಿಕರು ಕಳಂಕಿತರ ರಾಜೀನಾಮೆಯನ್ನು ಬಯಸಿದ್ದಾರೆ", ಎಂದು ರಾಹುಲ್ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ