ಕಾಣೆಯಾದ ರಾಹುಲ್ ಗಾಂಧಿ: ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು

ಶುಕ್ರವಾರ, 27 ಫೆಬ್ರವರಿ 2015 (20:40 IST)
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಪಕ್ಷದ ಸೋಲಿಗಾಗಿ ಆತ್ಮಾವಲೋಕನ ನಡೆಸಲು ಎರಡು ವಾರಗಳ ರಜೆಯಲ್ಲಿ ಹೋಗಿರುವುದು ಮತ್ತು ಪ್ರಕೃತ ಅವರು ಎಲ್ಲಿದ್ದಾರೆಂದೇ ಯಾರಿಗೂ ಗೊತ್ತಾಗದಿರುವುದು ಪಕ್ಷದ ಒಳಗೇ ಹಲವರಲ್ಲಿ ಅಸಮಾಧಾನ, ಕೋಪ-ತಾಪ, ನಿರಾಶೆಗೆ ಕಾರಣವಾಗಿದೆ. ಅಂತೆಯೇ ಅನಪೇಕ್ಷಿತ ವಿಡಂಬನಾತ್ಮಕ ವದಂತಿಗಳನ್ನು ಸೃಷ್ಟಿಸುವವರಿಗೆ ಅವರ ಗೈರು ಅತ್ಯುತ್ತಮ ಅವಕಾಶವನ್ನೂ ಕಲ್ಪಿಸಿರುವಂತಿದೆ.
 
ಅಹ್ಮದಾಬಾದ್‌ನ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಕೆಲವರು "ರಾಹುಲ್‌ ಗಾಂಧಿ ಅವರನ್ನು ಹುಡುಕಿಕೊಟ್ಟವರಿಗೆ ಆಕರ್ಷಕ ನಗದು ಬಹುಮಾನ ಕೊಡಲಾಗುವುದು' ಎಂದು ಘೋಷಿಸುವ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು, ಬ್ಯಾನರ್‌ಗಳನ್ನು ಹಾಕುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.
 
ಈ ನಡುವೆ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಉಪಾಧ್ಯಕ್ಷರಾಗಬೇಕೆಂದು ಒತ್ತಾಯಿಸಿದ್ದಾರೆ. ಮತ್ತೆ ಕೆಲವರು ಆಕೆಯೇ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ಕಾಂಗ್ರೆಸ್‌ ಕಾರ್ಯಕರ್ತರು ರಾಹುಲ್‌ ಬಗ್ಗೆ ವ್ಯಂಗ್ಯ - ವಿಡಂಬನೆಯ ಅಪಪ್ರಚಾರದ ಅಭಿಯಾನ ನಡೆಸುತ್ತಿರುವ ಬಿಜೆಪಿಯ ಕೆಲವು ಕಾರ್ಯಕರ್ತರ ಜತೆಗೆ ಸೇರಿಕೊಂಡು ಈ ಪಿತೂರಿಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್‌ ಪಕ್ಷದೊಳಗಿನಿಂದ ಕೇಳಿ ಬಂದಿದೆ.
 
ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ ಪಡೆಯಲು ಹವಣಿಸುತ್ತಿರುವ ಅಹ್ಮದಾಬಾದ್‌ನ ಉದ್ಯಮಿ ಅಮರ್‌ ವೈಶ್ಯ ಅಲಿಯಾಸ್‌ ಮುನ್ನಾ ಭೈಯ್ನಾ ಅವರು ನೆಹರೂ ಗಾಂಧಿ ಕುಟುಂಬದ ಪೂರ್ವಜರ ಮನೆಯಾಗಿರುವ ಆನಂದ ಭವನದ ಸಮೀಪ ಒಂದು ದೊಡ್ಡ ಬ್ಯಾನರ್‌ ಹಾಕಿಸಿದ್ದಾರೆ. "ರಾಹುಲ್‌ ಗಾಂಧಿ ಕಳೆದು ಹೋಗಿದ್ದಾರೆ - ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನವಿದೆ' ಎಂಬ ಘೋಷಣೆ ಆ ಬ್ಯಾನರ್‌ನಲ್ಲಿದೆ.
 
"ರಾಹುಲ್‌ ಗಾಂದಿ ಒಬ್ಬ ಪಲಾಯನವಾದಿ. ಅವರು ತಮ್ಮ ಸಹವರ್ತಿಗಳನ್ನು, ಹಿಂಬಾಲಕರನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ. ಯುದ್ಧರಂಗದಿಂದ ರಾಹುಲ್‌ ಓಡಿ ಹೋಗಿದ್ದಾರೆ. ಆದುದರಿಂದಲೇ ನಾನು ಆತನನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದೇನೆ' ಎಂದು ವೈಶ್ಯ ಹೇಳುತ್ತಾರೆ.
 
 

ವೆಬ್ದುನಿಯಾವನ್ನು ಓದಿ