ಮಾತು ಕಡಿಮೆ ಮಾಡಿ ಜನಪರ ಯೋಜನೆಗಳನ್ನು ಜಾರಿಗೆ ತನ್ನಿ: ಮೋದಿಗೆ ರಾಹುಲ್ ಕಿವಿಮಾತು

ಬುಧವಾರ, 27 ಮೇ 2015 (17:53 IST)
ಇದೊಂದು ಸೂಟು ಬೂಟಿನ ಸರಕಾರ. ರಾಜಕೀಯ ಭಾಷಣ ಮಾಡುವುದರಲ್ಲಿಯೇ ಒಂದು ವರ್ಷ ಕಳೆದಿದೆ. ಈಗಲಾದರೂ ಮಾತು ಕಡಿಮೆ ಮಾಡಿ ಜನಪರ ಯೋಜನೆಗಳನ್ನು ಜಾರಿಗೆ ತನ್ನಿ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. 
 
ಕೋಝಿಕೋಡ್‌ನಲ್ಲಿ ಯುವ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾನು ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮೋದಿಯದ್ದು ಸೂಟು-ಬೂಟಿನ ಸರಕಾರ ಎಂದು ನಾನು ಕರೆದಿರುವುದು ಸೂಕ್ತ ಎಂದು ಜನತೆ ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಸೂಟ್ ಧರಿಸುವುದು ಫ್ಯಾಶನ್ ಐಕಾನ್ ಎಂದು ಅವರನ್ನು ಜನತೆ ಕರೆಯುವುದು ಒಳ್ಳೆಯ ಸಂಗತಿ. ಆದರೆ, ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿರುವಾಗ ಮೋದಿಯವರು 10 ಲಕ್ಷ ರೂಪಾಯಿ ಬೆಲೆ ಬಾಳುವ ಸೂಟು ಧರಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. 
 
ದೇಶದಲ್ಲಿ ರೈತರು, ಕಾರ್ಮಿಕರು, ಬಡವರು ಪ್ರತಿನಿತ್ಯ ದುಡಿದರೂ ಕೂಲಿಸಿಗದೆ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಯಾದಂತಹ ಪ್ರಧಾನಿ ಮೋದಿ 10 ಲಕ್ಷ ರೂಪಾಯಿ ಮೌಲ್ಯದ ಸೂಟ್ ಧರಿಸಿ ಓಡಾಡುತ್ತಿರುವುದು ರೈತರಿಗೆ ಚಿಂತೆ ಮೂಡಿಸಿದೆ ಎಂದರು. 
 
ಪ್ರಧಾನಿ ಮೋದಿ ದೇಶದ ಜನತೆಯ ಬಗ್ಗೆ ಕಾಳಜಿ ಹೊಂದಿಲ್ಲ ಎನ್ನುವುದೇ ತುಂಬಾ ವಿಷಾದಕರ ಸಂಗತಿ. ಮೋದಿಯವರು ಜಪಾನ್, ಬ್ರಿಟನ್, ನೇಪಾಳ, ಚೀನಾ, ಮಂಗೋಲಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಆದರೆ ಅವರು ಯಾವತ್ತೂ ದೇಶದ ರೈತನ ಮನೆಗೆ ಹೋಗಲಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ