ಕಪ್ಪುಹಣ ವಿರುದ್ಧದ ಹೋರಾಟ ದುರ್ಬಲಗೊಳಿಸಲು ರಾಹುಲ್ ಗಾಂಧಿ ಯತ್ನ: ಬಿಜೆಪಿ

ಶನಿವಾರ, 24 ಡಿಸೆಂಬರ್ 2016 (15:45 IST)
ಕಪ್ಪು ಹಣ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರದಾನಿ ಮೋದಿ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.  
 
ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರಗಳಿಂದಾಗಿ ಕಪ್ಪು ಹಣ ವಿರುದ್ಧ ಸಮರ ಸಾರಲಾಗಿದೆ. ಮೋದಿ ಈಗಾಗಲೇ ಕಾಂಗ್ರೆಸ್ ಮುಕ್ತ ಭಾರತವಾಗಿಸಿದ್ದಾರೆ. ಇದೀಗ ಭ್ರಷ್ಟಾಚಾರವನ್ನು ಮುಕ್ತಗೊಳಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಶಹಾನವಾಜ್ ಹುಸೈನ್ ತಿಳಿಸಿದ್ದಾರೆ.
 
ಸಬರ್ಬನ್ ಬಾಂದ್ರಾದಲ್ಲಿರುವ ಚೌಕ್‌ವೊಂದಕ್ಕೆ ಖ್ಯಾತ ಗಾಯಕ ಮೊಹಮ್ಮದ್ ರಫಿ ಹೆಸರನ್ನಿಟ್ಟು ಉದ್ಘಾಟನೆ ಮಾಡಿದ ನಂತರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಸದಾ ಆಧಾರರಹಿತ ಹೇಳಿಕೆಗಳನ್ನು ನೀಡಿ ಕಪ್ಪು ಹಣ ವಿರುದ್ದದ ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರು ಯಶಸ್ವಿಯಾಗುವುದಿಲ್ಲ ಎಂದರು.
 
ದೇಶದಲ್ಲಿ ಭೀಕರ ಬರಗಾಲ ಎದುರಾಗಿದ್ದರೂ ಶಿವಾಜಿ ಪ್ರತಿಮೆಗೆ 3600 ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವುದು ಸರಿಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಾಜಿಯಂತಹ ಧೀಮಂತ ಹೋರಾಟಗಾರನ ಪ್ರತಿಮೆ ಸ್ಥಾಪನೆಯಲ್ಲಿ ರಾಜಕೀಯ ಮಾಡಬಾರದು ಎಂದರು.
 
ಮಹಾರಾಷ್ಟ್ರ ಜನತೆಯ ಬಹುವರ್ಷಗಳ ಕನಸನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ನನಸು ಮಾಡಿದೆ. ಶಿವಾಜಿ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ. ವಿಶ್ವದಾದ್ಯಂತ ಶಿವಾಜಿ ಅಭಿಮಾನಿಗಳಿದ್ದಾರೆ ಎಂದು ಬಿಜೆಪಿ ಸಂಸದ ಶಹಾನವಾಜ್ ಹುಸೈನ್ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ