ಪ್ರಧಾನಿಯ ಬಿಹಾರ್ ವಿಶೇಷ ಪ್ಯಾಕೇಜ್ ಲೇವಡಿ ಮಾಡಿದ ರಾಹುಲ್ ಗಾಂಧಿ

ಮಂಗಳವಾರ, 18 ಆಗಸ್ಟ್ 2015 (21:14 IST)
ಪ್ರದಾನಮಂತ್ರಿ ನರೇಂದ್ರ ಮೋದಿ ಬಿಹಾರ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿರುವುದನ್ನು ಲೇವಡಿ ಮಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮತಗಳನ್ನು ಪಡೆಯಲು ಇಂತಹ ಭರವಸೆಗಳನ್ನು ನೀಡುವುದು ಅವರ ಹವ್ಯಾಸವಾಗಿದೆ. ಇದು ಕೂಡಾ ಒನ್ ರ್ಯಾಂಕ್ ಒನ್ ಪೆನ್ಶನ್‌ನಂತೆ ನೆನೆಗುದಿಗೆ ಮಾತ್ರ ಬೀಳದಿರಲಿ ಎಂದು ವ್ಯಂಗ್ಯವಾಡಿದ್ದಾರೆ.
 
ಬಿಹಾರ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಲು ಮೋದಿ ಬಳಿ ಹಣವಿದೆ. ಆದರೆ ಮಾಜಿ ಸೈನಿಕರಿಗೆ ನೀಡಲು ಹಣವಿಲ್ಲ. ವಿದೇಶಗಳಿಗೆ ಪ್ರವಾಸಕ್ಕೆ ತೆರಳಲು ಅವರ ಬಳಿ ಹಣವಿದೆ. ಆದರೆ, ಸೈನಿಕರಿಗೆ ಕೊಡಲು ಹಣವಿಲ್ಲ ಎಂದು ಲೇವಡಿ ಮಾಡಿದರು.
 
ಬಿಹಾರ್‌ನಲ್ಲಿ ಪ್ಯಾಕೇಜ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಂಬರುವ 2017ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಅಲ್ಲಿಯೂ ಮೋದಿಯವರು ವಿಶೇಷ ಪ್ಯಾಕೇಜ್ ಘೋಷಿಸಿದಲ್ಲಿ ಆಶ್ಚರ್ಯವಾಗುವುದಿಲ್ಲ ಎಂದರು.
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಗೆ ತರುವುದಾಗಿ ಘೋಷಿಸಿದ್ದರು. ಆ ಘೋಷಣೆ ಈಡೇರಿದೆಯೇ? ಹಲವಾರು ಭರವಸೆಗಳನ್ನು ನೀಡಿದ್ದಾರೆ. ಆದರೆ, ಯಾವ ಭರವಸೆಯು ಜಾರಿಗೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
 
ಮುಂಗಾರು ಅಧಿವೇಶನದ ನಂತರ ಲೋಕಸಭೆ ಕ್ಷೇತ್ರಕ್ಕಾಗಿ ಭೇಟಿ ನೀಡುವುದಾಗಿ ನೀಡಿದ ವಾಗ್ದಾನದಂತೆ ಎರಡು ದಿನಗಳ ಅಮೇಥಿ ಪ್ರವಾಸವನ್ನು ರಾಹುಲ್ ಗಾಂಧಿ ಆರಂಭಿಸಿದ್ದಾರೆ.

ವೆಬ್ದುನಿಯಾವನ್ನು ಓದಿ