ಒಳ್ಳೆದಿನದ ಸರಕಾರ ವಿಫಲವಾಗಿದೆ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಸೋಮವಾರ, 20 ಏಪ್ರಿಲ್ 2015 (16:39 IST)
ದೇಶದಲ್ಲಿ ಒಳ್ಳೆದಿನಗಳನ್ನು ತರುತ್ತೇವೆ ಎನ್ನುವ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಒಳ್ಳೆ ದಿನಗಳನ್ನು ತರುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಇಂದು ಸಂಸತ್ತಿನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಮೋದಿ ನೇತೃತ್ವದ ಸರಕಾರ ಕೇವಲ ಕಾರ್ಪೋರೇಟ್ ಉದ್ಯಮಿಗಳು, ಅಂಬಾನಿ, ಆದಾನಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಬಡವರು, ಶೋಷಿತ ವರ್ಗದ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಕಿಡಿಕಾರಿದರು.

ರೈತರು ಸರಕಾರದ ಮೇಲಾಗಲಿ ಅಥವಾ ದೇವರ ಮೇಲಾಗಲಿ ಭರವಸೆ ಇಡಬಾರದು ಎಂದು ಹೇಳಿಕೆ ನೀಡಿ ತಮ್ಮ ಮನ್‌ ಕಿ ಬಾತ್‌ನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ. ಇಂತಹ ನಾಯಕರಿರುವ ಪಕ್ಷದಿಂದ ಯಾವ ರೀತಿ ದೇಶ ಅಭಿವೃದ್ಧಿಯಾಗುತ್ತದೆ ಎಂದು ಸರಕಾರವನ್ನು ಪ್ರಶ್ನಿಸಿದರು.  

ಭೂ ಸ್ವಾಧೀನ ಮಸೂದೆಯನ್ನು ಜಾರಿಗೊಳಿಸಿ ರೈತರ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರದಲ್ಲಿರುವ ಬಿಜೆಪಿ ಸರಕಾರ, ರೈತರನ್ನು ಸಶಕ್ತಗೊಳಿಸದ ಮೋದಿ ಸರಕಾರ ದೇಶವನ್ನು ಹೇಗೆ ಸಶಕ್ತಗೊಳಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.      

ರೈತರ ಮೇಲೆ ಲಾಠಿ ಚಾರ್ಜ್ ಮಾಡಿ ಓಡಿಸಲಾಗುತ್ತಿದೆ. ರೈತ ಸಮೂಹವನ್ನೇ ನಾಶಪಡಿಸುವಂತಹ ಕೃತ್ಯಗಳು ನಡೆಯುತ್ತಿವೆ. ಭಾರತದಲ್ಲಿ ರೈತರು ಹಸಿರು ಕ್ರಾಂತಿ ಮಾಡಿದ್ದಾರೆ.ಅಂತಹ ರೈತರನ್ನು ಇಂದು ತುಳಿಯುವಂತಹ ಹುನ್ನಾರ ನಡೆದಿದೆ. ಇದು ಶ್ರೀಮಂತರ ಪರವಾಗಿರುವ ಸರಕಾರವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ವೆಬ್ದುನಿಯಾವನ್ನು ಓದಿ