ರಾಹುಲ್‌ಗೆ ಪ್ರಿಯಾಂಕಾಳನ್ನು ಸಕ್ರಿಯ ರಾಜಕಾರಣದಲ್ಲಿ ನೋಡುವಾಸೆ

ಬುಧವಾರ, 21 ಸೆಪ್ಟಂಬರ್ 2016 (14:01 IST)
ತಮ್ಮ ತಂಗಿ ಪ್ರಿಯಾಂಕಾ ಗಾಂಧಿ ರಾಜಕೀಯದಲ್ಲಿ ಸಕ್ರಿಯರಾಗುವುದನ್ನು ನೋಡಲು ನಾನು ಕಾತರಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕಿಸಾನ್ ಯಾತ್ರೆಯಲ್ಲಿ ತೊಡಗಿರುವ ಅವರು,ನಾನು ಎಲ್ಲರಿಗಿಂತ ಹೆಚ್ಚು ನಂಬುವುದು ನನ್ನ ತಂಗಿ ಪ್ರಿಯಾಂಕಾಳನ್ನು. ಆಕೆ ಸಕ್ರಿಯ ರಾಜಕಾರಣಕ್ಕೆ ಧುಮುಕುವುದನ್ನು ನೋಡಲು ಕಾತರಿಸುತ್ತಿದ್ದೇನೆ. ಆದರೆ ನಿರ್ಧಾರ ಮಾತ್ರ ಅವಳಿಗೆ ಬಿಟ್ಟಿದ್ದು. ರಾಜಕೀಯಕ್ಕೆ ಬರುವುದು ಅವಳಿಗೆ ಇಷ್ಟವಾದರೆ ಯಾವಾಗ ಮತ್ತು ಹೇಗೆ ಎಂಬುದು ಸಹ ಅವಳ ನಿರ್ಧಾರವಾಗಿರುತ್ತದೆ. ಅವಳು ರಾಜಕಾರಣಕ್ಕೆ ಬಂದರೆ ಪಕ್ಷಕ್ಕೂ ಲಾಭವಾಗುತ್ತದೆ ಎಂದಿದ್ದಾರೆ. 
 
ರಾಜೀವ್ ಗಾಂಧಿ- ಸೋನಿಯಾ ಗಾಂಧಿ ಪುತ್ರಿ, ಅಜ್ಜಿ ಇಂದಿರಾ ಗಾಂಧಿಯನ್ನೇ ಹೋಲುವ ಪ್ರಿಯಾಂಕಾ ಗಾಂಧಿಯವರನ್ನು ಸಕ್ರಿಯ ರಾಜಕಾರಣಕ್ಕೆ ಕರೆ ತರಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಕಂಡುಬರುತ್ತಿದೆ. ಇತ್ತೀಚಿಗೆ ಕಾಂಗ್ರೆಸ್ ಪ್ರಭಾವ ದೇಶದಲ್ಲಿ ದಯನೀಯವಾಗಿ ಕುಸಿಯುತ್ತಿರುವುದು, ಜನರನ್ನು ಸೆಳೆಯುವಲ್ಲಿ ರಾಹುಲ್ ಸಫಲರಾಗಿಲ್ಲ ಎಂಬುವುದು ಅದಕ್ಕೆ  ಪ್ರಮುಖ ಕಾರಣಗಳಾಗಿವೆ. ಅವರ ಸಹೋದರ ರಾಹುಲ್ ಕೂಡ ಸಹೋದರಿ ರಾಜಕೀಯಕ್ಕೆ ಬರುವುದು ತಮಗೂ ಇಷ್ಟವಿದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
 
ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಮೋದಿ ರೈತರ ಬಗ್ಗೆ ಸಂವೇದನಾರಹಿತರಾಗಿದ್ದಾರೆ. ಸುಳ್ಳು ಹೇಳಲು ಅವರಿಗೆ ಆರ್‌ಎಸ್ಎಸ್ ತರಬೇತಿ ನೀಡಿದೆ. ಪ್ರಧಾನಿ ಎಂದರೆ ಸೆಲ್ಫಿ ತೆಗೆದುಕೊಳ್ಳುವ, ಸುಳ್ಳು ಭರವಸೆ ನೀಡುವ ಯಂತ್ರವಾಗಿ ಬದಲಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
 
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಾಯಾವತಿ ನೇತೃತ್ವದ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ