ಪಠಾನ್‌ಕೋಟ್ ಉಗ್ರರ ದಾಳಿ ನಡೆದಾಗ ರಾಹುಲ್ ಯುರೋಪ್ ಪ್ರವಾಸದಲ್ಲಿದ್ದರು; ಬಿಜೆಪಿ

ಶನಿವಾರ, 30 ಜನವರಿ 2016 (14:40 IST)
ದಲಿತ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಆತ್ಮಹತ್ಯೆ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ರಾಹುಲ್ ಗಾಂಧಿ ಮತ್ತು ಜವಾಬ್ದಾರಿಗಳಿಗೆ ಒಂದಕ್ಕೊಂದು ಹೋಲಿಕೆಯಿಲ್ಲ. ಸತ್ತ ಹೆಣಗಳ ಮೇಲೆ ರಾಜಕೀಯ ಮಾಡುವುದನ್ನು ರಾಹುಲ್ ಗಾಂಧಿ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ರಾಹುಲ್ ಕೆಲ ಆಯ್ದ ವಿಷಯಗಳ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ಮಾಲ್ಡಾ ಗಲಭೆ ಮತ್ತು ಬಿಹಾರ್‌ನಲ್ಲಿ ಇಂಜಿನಿಯರ್‌ಗಳ ಹತ್ಯೆ ನಡೆದಾಗ ಒಂದೇ ಒಂದು ಹೇಳಿಕೆ ನೀಡಲಿಲ್ಲ. ಪಠಾನ್‌ಕೋಟ್ ದಾಳಿ ನಡೆದಾಗ ರಾಹುಲ್ ಯುರೋಪ್ ಪ್ರವಾಸದಲ್ಲಿದ್ದರು. 10 ದಿನಗಳ ನಂತರ ದೇಶಕ್ಕೆ ಮರಳಿ ಬಂದ ಸರಕಾರದ ವಿರುದ್ಧ ಆರೋಪ ಹೊರಿಸಿದರು ಎಂದು ತಿಳಿಸಿದ್ದಾರೆ.
 
ಸತ್ತ ಹೆಣಗಳ ಮೇಲೆ ರಾಜಕೀಯ ಮಾಡುವುದು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು, ಸಮಾಜದಲ್ಲಿ ಅಶಾಂತಿ ಹರಡುವುದು ಕಾಂಗ್ರೆಸ್ ಪಕ್ಷದ ಮಾರ್ಗಸೂತ್ರಗಳಾಗಿವೆ ಎಂದು ಲೇವಡಿ ಮಾಡಿದರು.
 
ಏತನ್ಮಧ್ಯೆ, ರಾಹುಲ್ ಗಾಂಧಿ ಹೈದ್ರಾಬಾದ್‌ಗೆ ಭೇಟಿ ನೀಡಿರುವುದರಲ್ಲಿ ರಾಜಕೀಯವಿಲ್ಲ ಎಂದು ಬಿಜೆಪಿ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ.ವಿದ್ಯಾರ್ಥಿಗಳು ದೇಶದ ಮುಂದಿನ ನಾಗರಿಕರಾಗಿದ್ದರಿಂದ ರಾಹುಲ್ ಹೈದ್ರಾಬಾದ್‌‌ಗೆ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ