ಪ್ರತಿಭಟನೆ ಪ್ರಸಾರಕ್ಕಾಗಿ ಸದನದಲ್ಲಿ ಸೂಕ್ತ ಸ್ಥಾನದ ಹುಡುಕಾಟ ನಡೆಸಿದ ರಾಹುಲ್ ಗಾಂಧಿ

ಮಂಗಳವಾರ, 28 ಜುಲೈ 2015 (16:02 IST)
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮುಂಗಾರು ಅಧಿವೇಶನದ ಆರಂಭದ ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಲೋಕಸಭಾ ಟೆಲಿವಿಜನ್ ಚಾನೆಲ್‌ನಲ್ಲಿ ಪ್ರಸಾರವಾಗದಿರುವುದರಿಂದ ಕಾಂಗ್ರೆಸ್ ಆಘಾತಗೊಂಡಿದೆ.
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸದನದಲ್ಲಿರುವ ಕ್ಯಾಮರಾಗಳನ್ನು ಗುರುತಿಸಿದ್ದು ನರೇಂದ್ರ ಮೋದಿ ಸರಕಾರದ ವಿರುದ್ಧದ ಪ್ರತಿಭಟನೆಯನ್ನು ಟೆಲಿವಿಜನ್ ಚಾನೆಲ್‌ನಲ್ಲಿ ಪ್ರಸಾರವಾಗುವ ಉದ್ದೇಶ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.   
 
44 ವರ್ಷ ವಯಸ್ಸಿನ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸದನದಲ್ಲಿರುವ ಟೆಲಿವಿಜನ್ ಕ್ಯಾಮರಾಗಳನ್ನು ಗುರುತಿಸಲು ಹೋರಟಾಗ ಕಲಾಪವನ್ನು ಚಿತ್ರೀಕರಿಸಲು ಮಾಧ್ಯಮ ಗ್ಯಾಲರಿಯ ಕೆಳಗಡೆ ಕ್ಯಾಮರಾ ಇರುವುದು ಕಂಡು ಬಂದಿದೆ.  
 
ಕಾಂಗ್ರೆಸ್ ಸಂಸದರು ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರೂ ಟೆಲಿವಿಜನ್ ಕ್ಯಾಮರಾ ಆ ದೃಶ್ಯಗಳನ್ನು ಸೆರೆಹಿಡಿಯಲಿಲ್ಲ. ಕ್ಯಾಮರಾ ಕೇವಲ ಕೇಂದ್ರ ಸಚಿವರು ಮತ್ತು ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಅವರತ್ತ ಫೋಕಸ್ ಮಾಡಿರುವುದು ರಾಹುಲ್ ಪತ್ತೆಹಚ್ಚಿದ್ದಾರೆ.  
 
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಕೇಂದ್ರ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಮುಂಗಾರು ಅಧಿವೇಶನದ ಕಲಾಪವನ್ನು ಅಸ್ಥವ್ಯಸ್ಥಗೊಳಿಸಿದೆ.  
 

ವೆಬ್ದುನಿಯಾವನ್ನು ಓದಿ