ಶಾಲಾ‌ಬಸ್‌ಗೆ ರೈಲು ಡಿಕ್ಕಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಗುರುವಾರ, 24 ಜುಲೈ 2014 (11:52 IST)
ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ರೈಲ್ವೆ ಕ್ರಾಸಿಂಗ್ ದಾಟುತ್ತಿದ್ದ ಶಾಲಾ ಬಸ್‌ಗೆ ರೈಲು ಡಿಕ್ಕಿ ಹೊಡೆದು 21 ಮಕ್ಕಳು ಮೃತಪಟ್ಟ ದುರಂತದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಗೋಳೋ ಎಂದು ಅಳುತ್ತಿರುವ ದೃಶ್ಯ ಕರುಳು ಮಿಡಿಯುವಂತೆ ಮಾಡಿದೆ. ಗಂಭೀರ ಗಾಯಗೊಂಡ ಮಕ್ಕಳನ್ನು ಕೋಂಪಲ್ಲಿಯ ಬಾಲಾಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಾಂದೇಡ್-ಸಿಕಂದರಾಬಾದ್ ಮಾರ್ಗದ ರೈಲು  ಕಾವಲುಗಾರರಹಿತ ಲೆವೆಲ್ ಕ್ರಾಸಿಂಗ್‌ನಲ್ಲಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ರೈಲು ಬರುತ್ತಿರುವುದನ್ನು ಗಮನಿಸಿದ್ದ ಬಸ್  ಚಾಲಕ ಕೂಡಲೇ ರೈಲ್ವೆ ಹಳಿ ದಾಟಬಹುದು ಎಂಬ ಭಾವನೆಯಲ್ಲಿ ಹಳಿ ದಾಟಲು ಪ್ರಯತ್ನಿಸಿದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿತ್ತು.  ರೈಲು ಡಿಕ್ಕಿ ಹೊಡೆದಕೂಡಲೇ ಸುಮಾರು  ಒಂದು ಕಿಮೀ ದೂರದವರೆಗೆ ಬಸ್ಸನ್ನು  ಎಳೆದುಕೊಂಡು ಹೋಗಿದ್ದರಿಂದ ಬಸ್  ನಜ್ಜುಗುಜ್ಜಾಗಿತ್ತು. ಕೆಲವು ಮಕ್ಕಳು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ರೈಲ್ವೆ ಗೇಟ್ ಇದ್ದಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಇಂತಹ ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಸ್ಪತ್ರೆಗೆ ಸೇರಿಸಿರುವ ಎಲ್ಲಾ ಮಕ್ಕಳಿಗೂ ವೆಂಟಿಲೇಟರ್ ಅಗತ್ಯ ಬಿದ್ದಿದ್ದು, ಮಕ್ಕಳ ಸ್ಥಿತಿ ಎಷ್ಟು ಗಂಭೀರವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮೃತಪಟ್ಟಿರುವ 21 ಮಕ್ಕಳನ್ನು ಗುರುತಿಸಿ ದುಃಖಭರಿತರಾದ ಪೋಷಕರಿಗೆ ವಿಚಾರವನ್ನು ತಿಳಿಸಬೇಕಾಗಿದೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಐದು ಮಂದಿ ಮಕ್ಕಳನ್ನು ಸಿಕಂದರಾಬಾದಿನ ಯಶೋದಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  ಬಾಳಿ, ಬದುಕಬೇಕಾಗಿದ್ದ ಚಿಕ್ಕಪುಟ್ಟ  ಮಕ್ಕಳು ಈ ದುರಂತದಲ್ಲಿ ಮೃತಪಟ್ಟಿರುವುದು  ವಿಧಿಯ ಕ್ರೂರ ಲೀಲೆಯಾಗಿದೆ. 

ವೆಬ್ದುನಿಯಾವನ್ನು ಓದಿ