ವೆಜ್ ಕರಿಯಲ್ಲಿ ಮೂಳೆ : ರೇಲ್ವೇ ಇಲಾಖೆಯ ಶುದ್ಧತೆ, ಗುಣಮಟ್ಟಕ್ಕೆ ಸಾಕ್ಷಿ!

ಮಂಗಳವಾರ, 23 ಸೆಪ್ಟಂಬರ್ 2014 (13:01 IST)
ಭಾರತೀಯ ರೈಲ್ವೆ ಶುದ್ಧ ಮತ್ತು ಗುಣಮಟ್ಟದ ಆಹಾರ ಸೇವೆಯನ್ನು ಒದಗಿಸುತ್ತದೆ ಎಂಬ ಭರವಸೆಯನ್ನು ಪ್ರಯಾಣಿಕರು ಬಿಟ್ಟುಬಿಟ್ಟಿದ್ದಾರೆ.   ಸಸ್ಯಾಹಾರಿ ಭಕ್ಷ್ಯದಲ್ಲಿ ಮೂಳೆಗಳು ಸಿಗುತ್ತವೆಯೆಂದರೆ? ಇನ್ನೆಲ್ಲಿಯದು ನಂಬಿಕೆಯ ಪ್ರಶ್ನೆ. 

ಬೆಂಗಳೂರು ನಿವಾಸಿ ತಿಕಮ್ ಚಂದ್ ಜೈನ್ (65) ರಾಜಧಾನಿ ಎಕ್ಸ್‌ಪ್ರೆಸ್‌ನಂತ  ಡೀಲಕ್ಸ್ ರೈಲಿನಲ್ಲಿ ಪ್ರಯಾಣ ಮಾಡುವಾಗ  ಈ ಅವ್ಯವಸ್ಥೆಗೆ ಸಾಕ್ಷಿಯಾದರು. ಸೆಪ್ಟಂಬರ್ 19 ರಂದು ದೆಹಲಿಯಿಂದ ಗೌಹಾತಿಗೆ ಪ್ರಯಾಣ ಬೆಳೆಸುತ್ತಿದ್ದ ಅವರು ವೆಜಿಟೇರಿಯನ್ ಆಹಾರವನ್ನು ಕೊಂಡುಕೊಂಡರು.  ಪರಿಶುದ್ಧ ಸಸ್ಯಾಹಾರ ಎಂದು ಕೊಂಡುಕೊಂಡ ಆಹಾರದಲ್ಲಿ ಮೂಳೆಗಳು ಕಂಡು ಬಂದಿದ್ದರಿಂದ  ಪ್ಯಾಂಟ್ರಿ ವ್ಯವಸ್ಥಾಪಕರಿಗೆ ಅವರು ದೂರು ನೀಡಿದರು. ಆದರೆ ತಪ್ಪನ್ನು ಒಪ್ಪಿಕೊಳ್ಳದ ಅವರು ಜೈನ್ ಮೇಲೆಯೇ ಹರಿಹಾಯ್ದರು. 
 
ನಂತರ ಪ್ಯಾಂಟ್ರಿ ಕಾರ್ ಮ್ಯಾನೇಜರ್ ಅವರಲ್ಲೂ ಈ ಕುರಿತು ನಾನು ದೂರು ಸಲ್ಲಿಸಿದೆ. ಆದರೆ ಅವರು ಕೂಡ ನನ್ನ ಜತೆ ವಾದಕ್ಕಿಳಿದರು  ಎಂದು ಹೇಳುತ್ತಾರೆ ಜೈನ್.
 
ಗೌಹಾತಿ ತಲುಪಿದ ಕೂಡಲೇ ಮಾಧ್ಯಮಗಳನ್ನು ಸಂಪರ್ಕಿಸಿ ರೇಲ್ವೇ ಇಲಾಖೆಯ ಈ ಆವಾಂತರವನ್ನು ಅವರು ಬಿಚ್ಚಿಟ್ಟರು. ಅವರ ಮೇಲೆ ರೇಗಾಡಿದ್ದ ಪ್ಯಾಂಟ್ರಿ ಕಾರ್ ಮ್ಯಾನೇಜರ್ ತಮ್ಮ ತಪ್ಪನ್ನು ಒಪ್ಪಿಕೊಂಡರು. ರವಿವಾರ ಮರಳಿ ಬೆಂಗಳೂರು ತಲುಪಿದ ಜೈನ್ ಭಾರತೀಯ ರೇಲ್ವೇ ಪ್ರಧಾನ ಕಚೇರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದು, ಪ್ರತ್ಯುತ್ತರ ಇನ್ನೂ ಬರಬೇಕಿದೆ.

ವೆಬ್ದುನಿಯಾವನ್ನು ಓದಿ