ಶಿವಸೇನೆ ಪ್ರಾಬಲ್ಯ ತಡೆಗೆ ರಾಜ್ ಠಾಕ್ರೆ-ನಾರಾಯಣ್ ರಾಣೆ ಚರ್ಚೆ

ಸೋಮವಾರ, 29 ಜೂನ್ 2015 (13:04 IST)
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಹೆಚ್ಚುತ್ತಿರುವ ಶಿವಸೇನೆ ಪ್ರಾಬಲ್ಯವನ್ನು ತಡೆಯುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಕಾಂಗ್ರೆಸ್ ಮುಖಂಡ ನಾರಾಯಣ್ ರಾಣೆ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕೊಂಕಣ ಪ್ರವಾಸದಲ್ಲಿದ್ದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ದೂರವಾಣಿ ಮೂಲಕ ಕರೆ ಮಾಡಿ ನಾರಾಯಣ್ ರಾಣೆಯನ್ನು ಸಿಂಧುದುರ್ಗ ಜಿಲ್ಲೆಯ ಕಂಕಾವಲಿ ನಿವಾಸಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು ಎನ್ನಲಾಗಿದೆ.
 
ಕಾಂಗ್ರೆಸ್ ಮುಖಂಡ ನಾರಾಯಣ್ ರಾಣೆ, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ನಂತರ ಬಾಂದ್ರಾ ಉಪಚುನಾವಣೆಯಲ್ಲೂ ಸೋಲನುಭವಿಸಿ ಮುಖಭಂಗ ಅನುಭವಿಸಿದ್ದಾರೆ.
 
ಅದರಂತೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ 288 ಕ್ಷೇತ್ರಗಳಲ್ಲಿ ಕೇವಲ ಒಂದು ಸೀಟು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 
 
ಉಭಯ ನಾಯಕರರು ಕೊಂಕಣ ಭಾಗದಲ್ಲಿ ಚರ್ಚೆ ನಡೆಸಿ ಶಿವಸೇನೆ ರಾಜಕೀಯಕ್ಕೆ ಬ್ರೆಕ್ ಹಾಕಲು ರಣತಂತ್ರ ರೂಪಿಸಿದೆ ಎನ್ನುವ ಅಂಶವನ್ನು ಬಹಿರಂಗಪಡಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ಶಿವಸೇನೆ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 
ಮಾಜಿ ಮುಖ್ಯಮಂತ್ರಿಗಳಾದ ವಿಲಾಸ್‌ರಾವ್ ದೇಶಮುಖ್ ಮತ್ತು ಅಶೋಕ್ ಚೌಹಾನ್ ಕೂಡಾ ಹಿಂದೆ ರಾಜ್ ಠಾಕ್ರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಶಿವಸೇನೆ ಪ್ರಾಬಲ್ಯವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು.
 

ವೆಬ್ದುನಿಯಾವನ್ನು ಓದಿ