ಬಿಜೆಪಿಗೆ ಮತ ಹಾಕದಿದ್ದರೆ ಮನೆಯಿಂದ ಹೊರಹಾಕುತ್ತೇನೆ: ಬಿಜೆಪಿ ಶಾಸಕ

ಸೋಮವಾರ, 22 ಡಿಸೆಂಬರ್ 2014 (12:11 IST)
ಬಿಜೆಪಿ ನಾಯಕರು, ಸಂಸದರು, ಶಾಸಕರು ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಕೇಂದ್ರ ಸರಕಾರವನ್ನು ಮುಜುಗರಕ್ಕೊಳಪಡಿಸುತ್ತಿರುವುದು ಅವ್ಯಾಹತವಾಗಿ ಮುಂದುವರೆದಿದೆ. ಅ ಕುರಿತು ಸ್ವತಃ ಮೋದಿಯವರೇ ಎಚ್ಚರಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. 
 
ಇಂತಹ ಘಟನೆಗಳಿಗೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ರಾಜಸ್ಥಾನದಲ್ಲಿ ಬಿಜೆಪಿ ಶಾಸಕರೊಬ್ಬರು ಮತದಾರರಿಗೆ ಬೆದರಿಕೆ ಹಾಕಿದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಇತ್ತೀಚೆಗಷ್ಟೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ  ಅವರು ಜನರ ಮೇಲೆ ಒತ್ತಡ ಹಾಕುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಕ್ಕೆ ಇರಿಸುಮುರಿಸುಂಟು ಮಾಡಿದೆ. "ನೀವು ಬಿಜೆಪಿಗೆ ಮತ ಹಾಕಲೇಬೇಕು. ಇಲ್ಲದಿದ್ದರೆ ನೀವೀಗ ಇರುವ ಅಕ್ರಮ ಮನೆಗಳಿಂದ ನಿಮ್ಮೆಲ್ಲರನ್ನೂ ಹೊರದಬ್ಬುತ್ತೇನೆ" ಎಂದು ಭವಾನಿ ಸಿಂಗ್ ಮತದಾರರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದೆ. 
 
ಆದರೆ ತಮ್ಮ ವಿರುದ್ಧ ಆರೋಪವನ್ನು ತಳ್ಳಿ ಹಾಕಿರುವ ಭವಾನಿ ಸಿಂಗ್, "ತಾವು ಈ ರೀತಿಯ ಬೆದರಿಕೆ ಒಡ್ಡಿಲ್ಲ ಎಂದಿದ್ದಾರೆ. ಬಿಜೆಪಿ ಜನೋಪಯೋಗಿ ಕಾರ್ಯಗಳನ್ನು ಮಾಡಿದೆ. ಇದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಯಲು ಸಹಾಯಕವಾಗುವಂತೆ ಬಿಜೆಪಿಗೆ ಮತ ನೀಡಿ", ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ