ಅಸಂವೇದನಾಶೀಲ: ಅತ್ಯಾಚಾರ ಪೀಡಿತೆ ಜತೆ ಮಹಿಳಾ ಆಯೋಗದ ಸದಸ್ಯೆ ಸೆಲ್ಫಿ

ಗುರುವಾರ, 30 ಜೂನ್ 2016 (14:29 IST)
ಯುವಕರು, ಮಕ್ಕಳು, ಜವಾಬ್ದಾರಿ ಸ್ಥಾನದಲ್ಲಿರುವವರು ಎಂಬ ಪರಿಗಣನೆ ಇಲ್ಲದೇ ಎಲ್ಲರಿಗೂ ಸೆಲ್ಫಿ ಹುಚ್ಚು ಹಿಡಿದಿದೆ ಎಂದೆನಿಸುತ್ತದೆ. ಇದೇ ಸೆಲ್ಫಿ ಹುಚ್ಚಿನಲ್ಲಿ ಮಹಾರಾಷ್ಟ್ರದ ಸಚಿವೆಯೊಬ್ಬರು ಬರಪೀಡಿತ ಪ್ರದೇಶದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಪಹಾಸ್ಯಕ್ಕೆ, ಖಂಡನೆಗೆ ಗುರಿಯಾಗಿದ್ದರು. ಇದೀಗ ಜೈಪುರ ಮಹಿಳಾ ಆಯೋಗದ ಸದಸ್ಯರೊಬ್ಬರು  ಇಂತಹದೇ ಅಸಂವೇದನಾಶೀಲ, ಆಘಾತಕಾರಿ ಕೃತ್ಯವನ್ನೆಸಗಿದ್ದಾರೆ. ಅವರು ಅತ್ಯಾಚಾರ ಪೀಡಿತೆಯ ಜತೆ ಸೆಲ್ಫಿ ಕ್ಕಿಕ್ಕಿಸಿಕೊಂಡಿದ್ದು ಇದೀಗ ವೈರಲ್ ಆಗಿ ಹರಿದಾಡುತ್ತಿದೆ. ಮತ್ತೀ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. 
ಇಂತಹ ಸೂಕ್ಷ್ಮ ವಿಷಯದಲ್ಲಿ ಜವಾಬ್ದಾರಿ ತೋರಬೇಕಾದ, ಪೀಡಿತೆಗೆ ಸಾಂತ್ವನ ಹೇಳಬೇಕಾದ, ಆಕೆಯ ಪರ ನಿಲ್ಲಬೇಕಾದ ಮಹಿಳಾ ಆಯೋಗದವರೇ ಇಷ್ಟು ಅಸಂವೇದನಾಶೀಲರಾಗಿ ನಡೆದುಕೊಂಡಿರುವುದಕ್ಕೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ಅದರಲ್ಲೂ ಆಯೋಗದ ಮುಖ್ಯಸ್ಥೆ ಸುಮನ್ ಶರ್ಮಾರವರು ಸಹ ಈ ಸೆಲ್ಫಿಯಲ್ಲಿದ್ದಾರೆ. 
 
ಪೀಡಿತೆ ಉತ್ತರ ಜೈಪುರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಾಗ ಆಯೋಗದ ಸದಸ್ಯೆ ಸೌಮ್ಯ ಗುರ್ಜರ್ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
 
ನಾನು ಪೀಡಿತೆಯ ಜತೆ ಸೆಲ್ಫಿಯನ್ನು ಕ್ಲಿಕ್ಕಿಸುತ್ತಿದ್ದಾಗ ಸದಸ್ಯೆ ಸೆಲ್ಫಿ ಕ್ಲಿಕ್ಕಿಸಿದಳು. ಅವರು ಯಾವಾಗ ಸೆಲ್ಫಿ ತೆಗೆದರೆಂದು ನನಗೆ ಗೊತ್ತಾಗಲಿಲ್ಲ. ನಾನು ಈ ಕೃತ್ಯವನ್ನು ಖಂಡಿಸುತ್ತೇನೆ ಜತೆಗೆ ಅವರಿಂದ ನಾಳೆಯ ಒಳಗೆ ಸ್ಪಷ್ಟನೆಯನ್ನು ನೀಡುವಂತೆ ಕೇಳಿದ್ದೇನೆ ಎಂದು ಶರ್ಮಾ ಹೇಳಿದ್ದಾರೆ. 
 
ಗುರ್ಜರ್ ಸೆಲ್ಫಿ ಕ್ಲಿಕ್ಕಿಸುತ್ತಿರುವ ಎರಡು ಚಿತ್ರಗಳು ವಾಟ್ಸ್‌ಅಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ