ಮಹಾರಾಣಾ ಪ್ರತಾಪ್ ಮಹಾನ್ ಅಲ್ಲವೇ?

ಸೋಮವಾರ, 18 ಮೇ 2015 (11:06 IST)
"ಅಕ್ಬರ್‌ನನ್ನು ಮಹಾನ್ ಎಂದು ಕರೆಯುವಲ್ಲಿ ನನಗೆ ವಿರೋಧವಿಲ್ಲ. ಆದರೆ ಮಹಾರಾಣಾ ಪ್ರತಾಪ್‌ನನ್ನು ಮಹಾನ್ ಎಂದು ಗುರುತಿಸುವಲ್ಲಿ ಏನು ತೊಡಕಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ", ಎಂದು ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. 

 
ರಾಜಸ್ಥಾನದ  ಪ್ರತಾಪ್‌ಗಢ್‌ದಲ್ಲಿ ಭಾನುವಾರ ಮಹಾರಾಣಾ ಪ್ರತಾಪ್ ಪ್ರತಿಮೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, "ಇತಿಹಾಸಕಾರರು ಅಕ್ಬರ್‌ನನ್ನು ಗ್ರೇಟ್ ಎಂದು ವರ್ಣಿಸಿರುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಮೇವಾರದ ಆಡಳಿತಗಾರ ಮಹಾರಾಣಾ ಪ್ರತಾಪ್‌ಗೂ ಮಹತ್ವವನ್ನು ನೀಡದೆ ಕಡೆಗಣಿಸಲಾಗಿದೆ. ಮಹಾರಾಣಾ ಅವರ ಅನುಪಮ ಶೌರ್ಯ ಮತ್ತು ತ್ಯಾಗಕ್ಕೆ ಪ್ರತಿಯಾಗಿ ಅವರಿಗೆ ಹೆಚ್ಚಿನ ಗೌರವ ಮತ್ತು ಘನತೆಯನ್ನು ಪ್ರದಾನ ಮಾಡಬೇಕು. ಈ ಕಾರಣಕ್ಕೆ ಇತಿಹಾಸವನ್ನು ಪುನಃ ತಿದ್ದಬೇಕಿದೆ", ಎಂದು ಅವರು ಹೇಳಿದ್ದಾರೆ. 
 
"ಮಾತೃಭೂಮಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ವೀರ ಸೇನಾನಿ ಅವರ ಶೌರ್ಯ, ಬಲಿದಾನ ದೇಶವಾಸಿಗಳಿಗಷ್ಟೇ ಅಲ್ಲ, ವಿದೇಶಿಗರಿಗೂ ಪ್ರೇರಣಾದಾಯಕವಾಗಿದೆ. ಹಲ್ದೀಘಾಟಿ ಕದನದಲ್ಲಿ ಅಕ್ಬರ್‌ನನ್ನು ಸೋಲಿಸಿದ ಮಹಾರಾಣಾ ಪ್ರತಾಪ್ ಕುರಿತು ಇತಿಹಾಸಕಾರರು ಬೆಳಕು ಚೆಲ್ಲಬೇಕಿದೆ. ಮುಂದಿನ ಜನಾಂಗಕ್ಕೆ ಪ್ರತಾಪ್ ಮಹಾನ್ ಎಂಬ ಸತ್ಯವನ್ನು ಪರಿಚಯಿಸಬೇಕಿದೆ", ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.  
 
ಮಹಾರಾಣಾ ಪ್ರತಾಪ್ 475 ನೇ ಜಯಂತಿಯನ್ನು ಆಚರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಸಿಂಗ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ