ಉಗ್ರ ಸೈಫುಲ್ಲಾ ತಂದೆಯ ಬಗ್ಗೆ ರಾಜನಾಥ್ ಸಿಂಗ್ ಮೆಚ್ಚುಗೆ

ಗುರುವಾರ, 9 ಮಾರ್ಚ್ 2017 (17:06 IST)
ರಾಷ್ಟ್ರೀಯ ತನಿಖಾ ಸಂಸ್ಥೆ  ಉತ್ತರ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಬಲಿಯಾದ ಸ್ವಯಂಘೋಷಿತ ಉಗ್ರ ಸೈಫುಲ್ಲಾ ತಂದೆ ಮಗನ ಶವವನ್ನು ಸ್ವೀಕರಿಸಲು ನಿರಾಕರಿಸಿದ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ರೈಲು ಸ್ಪೋಟ ಮತ್ತು ಲಖನೌ ಎನ್‌ಕೌಂಟರ್ ಬಗ್ಗೆ ಲೋಕಸಭೆಯಲ್ಲಿ ವಿವರಿಸಿದ ಸಿಂಗ್, ಒಬ್ಬ ಉಗ್ರನನ್ನು ಹತಗೈದು ಆತನ ಬಳಿಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.ಇತರೆ ಆರು ಶಂಕಿತರನ್ನು ಬಂಧಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಹತನಾದ ಸೈಫುಲ್ಲಾನ ತಂದೆ ದೇಶಕ್ಕೆ ಮಾದರಿ ಎಂದು ಅವರು ತಿಳಿಸಿದ್ದಾರೆ. ಸೈಫುಲ್ಲಾನ ತಂದೆ ಸರ್ತಾಜ್ ಬಗ್ಗೆ ನಮಗೆ ಅನುಕಂಪವಿದೆ. ಜತೆಗೆ ಅವರ ಬಗ್ಗೆ ಸರ್ಕಾರಕ್ಕೆ ಹೆಮ್ಮೆ ಇದೆ. ಸಂಪೂರ್ಣ ಲೋಕಸಭೆ ನನ್ನೊಂದಿಗೆ ಇದೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಜತೆಗೆ ಮಧ್ಯಪ್ರದೇಶ ರೈಲು ಸ್ಪೋಟ ಮತ್ತು ಎನ್‌ಕೌಂಟರ್ ಬಗ್ಗೆ ತನಿಖೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
 
ಲಖನೌನ ಠಾಕೂರ್‌ಗಂಜ್ ಪ್ರದೇಶದಲ್ಲಿ ಎಟಿಎಸ್ (ಭಯೋತ್ಪಾದಕ ನಿಗ್ರಹ ಪಡೆ) ಗುಂಡೇಟಿಗೆ ಹತನಾದ ಶಂಕಿತ ಉಗ್ರ ಸೈಫುಲ್ಲಾ ಮೃತದೇಹವನ್ನು ಸ್ವೀಕರಿಸಲು ಕಾನ್ಪುರದ ನಿವಾಸಿಯಾಗಿರುವ ಆತನ ತಂದೆ ಸರ್ತಾಜ್ ನಿರಾಕರಿಸಿದ್ದರು.
 
ದೇಶದ್ರೋಹಿ ನಮ್ಮ ಮಗನಾಗಿರಲು ಸಾಧ್ಯವಿಲ್ಲ. ನಾವು ಭಾರತೀಯರು. ಇಲ್ಲಿಯೇ ಹುಟ್ಟಿ ಬೆಳೆದವರು. ನಮ್ಮ ಪೂರ್ವಜರು ಕೂಡ ಭಾರತೀಯರು. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವ ನಮ್ಮ ಮಗನಾಗಿರಲು ಸಾಧ್ಯವಿಲ್ಲ.  ನಾವು ಈ ಮೃತದೇಹವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸರ್ತಾಜ್ ಹೇಳಿದ್ದರು. ಹೀಗಾಗಿ ಆತನ ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿರಸಲಾಗಿತ್ತು. 

ವೆಬ್ದುನಿಯಾವನ್ನು ಓದಿ