ಉಗ್ರರ ದಾಳಿ: ರಷ್ಯಾ ಪ್ರವಾಸ ರದ್ದುಗೊಳಿಸಿದ ಗೃಹ ಸಚಿವ ರಾಜನಾಥ್ ಸಿಂಗ್

ಭಾನುವಾರ, 18 ಸೆಪ್ಟಂಬರ್ 2016 (13:47 IST)
ಉತ್ತರ ಕಾಶ್ಮಿರದ ಉರಿ ಪಟ್ಟಣದಲ್ಲಿರುವ ಸೇನಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಮ್ಮ ರಷ್ಯಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
 
ಇಂದು ಬೆಳಗಿನ ಜಾವ ಸೇನಾ ಕಚೇರಿಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಂದ 17 ಯೋಧರು ಹುತಾತ್ಮರಾಗಿದ್ದಾರೆ. ಸೇನಾ ಕಾರ್ಯಾಚರಣೆ ನಡೆಸಿದ ನಂತರ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ.
 
ಇನ್ನೂ ಮೂವರು ಉಗ್ರರು ಸೇನಾಕಚೇರಿಯಲ್ಲಿ ಅಡಗಿರಬಹುದು ಎಂದು ಶಂಕಿಸಲಾಗಿದ್ದು, ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
 
ಘಟನೆಯಲ್ಲಿ ಗಾಯಗೊಂಡ ಸೈನಿಕರನ್ನು ಎನ್‌ಕೌಂಟರ್ ಸ್ಥಳದಿಂದ ಹೆಲಿಕಾಪ್ಟರ್ ಮೂಲಕ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ 2014ರ ಡಿಸೆಂಬರ್ 5 ರಂದು ಉರಿಪಟ್ಟಣದಲ್ಲಿರುವ ಸೇನಾ ಕಚೇರಿಯ ಮೇಲೆ ದಾಳಿ ನಡೆಸಿ ಅಟ್ಟಹಾಸವನ್ನು ಮೆರೆದಿದ್ದ ಉಗ್ರರನ್ನು ಸೇನಾಪಡೆಗಳು ಹತ್ಯೆಗೈದಿದ್ದವು.
 
ಪಾಕಿಸ್ತಾನದ ಸಲಾಮಾಬಾದ್ ನಾಲ್ಲಾ ಪ್ರದೇಶದ ಮೂಲಕ ಉರಿ ಪಟ್ಟಣವನ್ನು ಉಗ್ರರು ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದ್ದು, ಸಂಪೂರ್ಣ ಪ್ರದೇಶವನ್ನು ಸೇನಾಪಡೆಗಳು ಸುತ್ತುವರಿದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ