ಮುಂದಿನವಾರ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಂಡನೆ

ಶನಿವಾರ, 30 ಜುಲೈ 2016 (13:26 IST)
ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಮುಂದಿನ ವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.

ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಇದನ್ನು ಖಚಿತ ಪಡಿಸಿದ್ದಾರೆ. ಸಂವಿಧಾನದ 122ನೇ ತಿದ್ದುಪಡಿ ಮಸೂದೆ – 2014ನ್ನು ಮುಂದಿನ ವಾರ ಮೇಲ್ಮನೆಯಲ್ಲಿ ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಜುಲೈ 27ರಂದು ಶೇಕಡ 1ರಷ್ಟು ತಯಾರಿಕಾ ತೆರಿಗೆ ವಿಧಿಸುವ ಅಂಶವನ್ನು ಮಸೂದೆಯಿಂದ ಕೈಬಿಟ್ಟಿತ್ತು. ಅಲ್ಲದೆ, ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಮೊದಲ ಐದು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಗಳು ಆದಾಯದಲ್ಲಿ ನಷ್ಟ ಅನುಭವಿಸಿದರೆ ಅದಕ್ಕೆ ಪರಿಹಾರ ನೀಡುವ ಭರವಸೆಯನ್ನು ಸಹ ನೀಡಿತ್ತು.

ಆಗಸ್ಟ್ 12 ರಂದು ಅಂತ್ಯಗೊಳ್ಳಲಿರುವ ಮಾನ್ಸೂನ್ ಅಧಿವೇಶನದಲ್ಲಿಯೇ ಜಿಎಸ್‌ಟಿ ಬಿಲ್ ಪಾಸಾಗುವಂತೆ ಮಾಡಲೇಬೇಕೆಂಬ ಇಚ್ಛೆ ಸರ್ಕಾರದ್ದಾಗಿದೆ.

ಮೇ 2015ರಲ್ಲಿಯೇ ಲೋಕಸಭೆಯಲ್ಲಿ ಪಾಸ್ ಆಗಿರುವ ಬಿಲ್, ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಹುಮತವಿಲ್ಲದ ಕಾರಣ ಮತ್ತು ಪ್ರಮುಖ ವಿರೋಧ ಪಕ್ಷ  ಮಸೂದೆಯಲ್ಲಿ ಕೆಲ ಬದಲಾವಣೆಗಾಗಿ ಆಗ್ರಹಿಸುತ್ತಿರುವುದರಿಂದ ರಾಜ್ಯಸಭೆಯಲ್ಲಿಯೇ ಸಿಲುಕಿಕೊಂಡಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ