ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುವುದು ಬಾಬ್ರಿ ಮಸೀದಿಯನ್ನಲ್ಲ: ಬಿಜೆಪಿ

ಸೋಮವಾರ, 2 ಮಾರ್ಚ್ 2015 (17:43 IST)
ಎಂತಹ ಪರಿಸ್ಥಿತಿಯಲ್ಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುವುದು. ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಹಂಸರಾಜ್ ಗಂಗಾರಾಮ್ ಹೇಳಿದ್ದಾರೆ.
 
ದುಹಾ ಬಿಹ್ರಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಹಂಸರಾಜ್, ಅಯೋಧ್ಯೆಯ ರಾಮಮಂದಿರ ನಿರ್ಮಾಣ ಬಿಜೆಪಿಯ ಪ್ರಣಾಳಿಕೆಯಲ್ಲಿ ಇಲ್ಲ. ಆದರೆ, ಇದೊಂದು ಗೌರವ ಮತ್ತು ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
 
ಸಾಧು ಸಂತರು ರಾಮಮಂದಿರ ನಿರ್ಮಾಣ ಕಾರ್ಯ ಕುರಿತಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಮ್ ನಾಯಕರೂ ಕೂಡಾ ಸರಕಾರದೊಂದಿಗೆ ಚರ್ಚೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಿಸಲಾಗುವುದೇ ಹೊರತು ಮಸೀದಿಯಲ್ಲ ಎಂದು ತಿಳಿಸಿದ್ದಾರೆ.
 
ಸದಾ ರಾಮಮಂದಿರ ನಿರ್ಮಾಣ ಕುರಿತಂತೆ ಮಾತನಾಡುವುದು ಸರಿಯಲ್ಲ. ಸಮಯ ಬಂದಾಗ ರಾಮಮಂದಿರ ನಿರ್ಮಾಣವಾಗುತ್ತದೆ ಅನುಮಾನ ಬೇಡ ಎಂದರು.
 
ಸಬ್‌ಕಾ ಸಾಥ್ ಸಬ್‌ ಕಾ ವಿಕಾಸ್ ಘೋಠಣೆಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ರೈತರು ಮತ್ತು ನಿರುದ್ಯೋಗಿಗಳ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದ್ದಾರೆ.
  
ಶಿವಸೇನೆಯೊಂದಿಗಿನ ಬಿಜೆಪಿ ಭಿನ್ನಾಭಿಪ್ರಾಯ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಹಂಸರಾಜ್, ಬಿಜೆಪಿಯಲ್ಲಿ 282 ಸಂಸದರಿದ್ದಾರೆ.ಮಿತ್ರಪಕ್ಷಗಳೊಂದಿಗೆ ಬಿಜೆಪಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ