ಈ ಸರ್ಕಾರದ ಅವಧಿಯಲ್ಲಿಯೇ ರಾಮಮಂದಿರ ನಿರ್ಮಾಣ ಪೂರ್ಣ: ಸಾಧ್ವಿ ಪ್ರಾಚಿ

ಶನಿವಾರ, 23 ಮೇ 2015 (15:46 IST)
'ಅಯೋಧ್ಯಾದ ವಿವಾದಾತ್ಮಕ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಮತ್ತು ಸದ್ಯ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರಕಾರದ ಅಧಿಕಾರಾವಧಿಯಲ್ಲಿಯೇ ಇದನ್ನು ಪೂರ್ಣಗೊಳಿಸಲಾಗುವುದು', ಎಂದು ವಿಶ್ವ ಹಿಂದೂ ಪರಿಷದ್ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ. 

ಬಿಜೆಪಿ ದಲಿತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಾಧ್ವಿ, "ರಾಮ ಮಂದಿರ ನಿರ್ಮಾಣದ ಕುರಿತು ಮೇ 25 ರಂದು ಹರಿದ್ವಾರದಲ್ಲಿ ನಡೆಯಲಿರುವ ವಿಶ್ವ ಹಿಂದೂ ಪರಿಷದ್‌ನ ಕೇಂದ್ರೀಯ ಮಾರ್ಗದರ್ಶಕ ಮಂಡಲ ಆಯೋಜಿಸಿರುವ ಎರಡು ದಿನಗಳ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು", ಎಂದು ತಿಳಿಸಿದ್ದಾರೆ.  
 
ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಜಾಮೀನು ನೀಡಿರುವ ಕುರಿತು ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಕೇಳಿದಾಗ, "ಮಾಲೇಗಾಂ ಪ್ರಕರಣ ಆರೋಪಿ ಸಾಧ್ವಿ ಪ್ರಜ್ಞಾಗೆ ಜಾಮೀನು ನಿರಾಕರಿಸಲಾಗಿದೆ, ಅತ್ಯಾಚಾರ ಪೀಡಿತೆಯಾಗಿ ಕೋಮಾವಸ್ಥೆಗೆ ಜಾರಿದ್ದ ಅರುಣಾಗೆ 42 ವರ್ಷಗಳವರೆಗೆ ನ್ಯಾಯ ಸಿಗಲಿಲ್ಲ. ಆದರೆ ಸಲ್ಮಾನ್‌ಗೆ ಸುಲಭವಾಗಿ ಜಾಮೀನು ಸಿಕ್ಕಿತು", ಎಂದು ಅವರು ತಮ್ಮ ಮಾತುಗಳನ್ನು ಪುನರುಚ್ಚರಿಸಿದ್ದಾರೆ. 
 
ಸಲ್ಮಾನ್ ಮುಸ್ಲಿಂ ಎಂಬ ಕಾರಣಕ್ಕೆ ಆತನಿಗೆ ಜಾಮೀನು ನೀಡಲಾಯಿತು ಎಂದು ಸಾಧ್ವಿ ಈ ಹಿಂದೆ ಹೇಳಿಕೆ ನೀಡಿದ್ದರು. 

ವೆಬ್ದುನಿಯಾವನ್ನು ಓದಿ