ರಾಣಾ ಪ್ರತಾಪ್ ನಿಜವಾಗಿಯೂ ಮಹಾನ್, ಅಕ್ಬರ್ ಹೊರಗಿನವ: ರಾಜಸ್ಥಾನದ ರಾಜ್ಯಪಾಲ

ಸೋಮವಾರ, 29 ಜೂನ್ 2015 (16:14 IST)
ಮೊಘಲ್ ಸಾಮ್ರಾಟ್ ಅಕ್ಬರ್‌ನಂತೆ ರಾಣಾ ಪ್ರತಾಪ್ ಕೂಡ ಇತಿಹಾಸ ಕಂಡ ಮಹಾನ್ ವ್ಯಕ್ತಿ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೋಲಿಕೆ ಮಾಡಿ ಮಾತನಾಡಿದ ಕೆಲವೇ ವಾರಗಳಲ್ಲಿ ರಾಜಸ್ಥಾನದ ರಾಜ್ಯಪಾಲರಾದ ಕಲ್ಯಾಣ್ ಸಿಂಗ್ ಕೂಡ ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. '16 ನೇ ಶತಮಾನದಲ್ಲಿ ಮೇವಾಡವನ್ನಾಳಿದ ಆಡಳಿತಗಾರ ಪ್ರತಾಪ್ ಸಿಂಗ್ ನಿಜವಾಗಿಯೂ ಮಹಾನ್. ವಿದೇಶಿಗನಾದ ಅಕ್ಬರ್ ಅಲ್ಲ', ಎಂದು ಅವರು ಹೇಳಿದ್ದಾರೆ. 
 

ಭಾಮಶಾಹ್ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, "ಅಕ್ಬರ್ ದೇಶ ಸೇವೆ ಮಾಡಿಲ್ಲ. ಆತನಿಗೆ ಅಂಟಿಸಿರುವ ಮಹಾನ್ ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯಬೇಕು.  ಭಾರತದ ಇತಿಹಾಸದಲ್ಲಿ ಮಹಾರಾಣಾನಂತೆ ಕೆಲವೇ ಕೆಲವು ಸಾಮ್ರಾಟರು ಇದ್ದರು", ಎಂದಿದ್ದಾರೆ. 
 
1990ರ ದಶಕದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಕಲ್ಯಾಣ ಸಿಂಗ್, "ಅಕ್ಬರ್ ನಮ್ಮ ದೇಶವನ್ನಾಳುವ ಉದ್ದೇಶದಿಂದ ಹೊರಗಿನಿಂದ ಬಂದಂತವನು. ಆತನಿಗೆ ಮಹಾನ್ ಎನ್ನುವ ಬದಲು ಈ ಮಣ್ಣಿನ ಮಗನಾಗಿ ಹುಟ್ಟಿ, ಈ ಮಣ್ಣಿಗಾಗಿ ಮಡಿದ ಮಹಾರಾಣಾ ಪ್ರತಾಪ್ ಗ್ರೇಟ್", ಎಂದು ತಿಳಿಸಿದ್ದಾರೆ. 
 
ಮೇ 18 ರಂದು  ಪ್ರತಾಪ್‌ನಗರ್ ಜಿಲ್ಲೆಯಲ್ಲಿ ಮಹಾರಾಣಾ ಪ್ರತಾಪ್  ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, "ಅಕ್ಬರ್ ದ ಗ್ರೇಟ್ ಎಂದು ಬರೆದ ಇತಿಹಾಸಕಾರರ ಬಗ್ಗೆ ನನಗ್ಯಾವ ಆಕ್ಷೇಪವೂ ಇಲ್ಲ. ಆದರೆ ಮಹಾರಾಣಾ ಪ್ರತಾಪ್ ಯಾಕೆ ಗ್ರೇಟ್ ಅಲ್ಲ? ಎಂದು ಪ್ರಶ್ನಿಸಿದ್ದರು. ಮಹಾರಾಣಾನ ಶೌರ್ಯ ಮತ್ತು ತ್ಯಾಗ ಎಲ್ಲರ ಮೇಲೂ ಪ್ರಭಾವ ಬೀರುವಂತದ್ದು. ಆ ನೆಲೆಯಲ್ಲಿ ಮಹಾರಾಣಾ ಹೆಚ್ಚಿನ ಗೌರವ ಮತ್ತು ಪ್ರತಿಷ್ಠೆಗೆ ಅರ್ಹವಾದ ವ್ಯಕ್ತಿಯಾಗಿದ್ದಾನೆ", ಎಂದು ವಿಶ್ಲೇಷಿಸಿದ್ದರು.
 
ಪ್ರತಾಪ್ ಸಿಂಗ್ ಜತೆ ನಿಕಟ ಸಂಬಂಧ ಹೊಂದಿದ್ದ, ಮರು ಸೈನ್ಯ ಕಟ್ಟಿ ಮೊಘಲರ ವಿರುದ್ಧ ಹೋರಾಡಲು ರಜಪೂತ ಅರಸನಿಗೆ  ತನ್ನ ಆಸ್ತಿಯನ್ನೆಲ್ಲ ದಾನ ಮಾಡಿದ ಭಾಮಶಾಹ್ ನೆನಪಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಲ್ಯಾಣ್, 'ಶಾಲಾ ಪಠ್ಯಕ್ರಮಗಳನ್ನು ಉಲ್ಲೇಖಿಸಿ ಮಾತನಾಡುತ್ತ, ವಿದ್ಯಾರ್ಥಿಗಳಿಗೆ ಅಕ್ಬರ್ ದಿ ಗ್ರೇಟ್ ಎಂದು ಬೋಧಿಸಲಾಗುತ್ತದೆ. ಆದರೆ  ಪ್ರತಾಪ್ ಸಿಂಹ್ ಮಹಾನತೆಯನ್ನು ಯಾವ ಪಠ್ಯದಲ್ಲೂ ಅಳವಡಿಸಿಲ್ಲ', ಎಂದು ಖೇದವನ್ನು ವ್ಯಕ್ತ ಪಡಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ