ರೇಪ್ ಓಕೆ, ರೋಟಿ ನಾಟ್ ಓಕೆ; ಯಾಕೆ ?: ಪ್ರಶ್ನಿಸಿರುವ ಉದ್ಧವ್ ಠಾಕ್ರೆ

ಶುಕ್ರವಾರ, 25 ಜುಲೈ 2014 (10:57 IST)
ಮಹಾರಾಷ್ಟ್ರ ಸದನದ ಪ್ರಕರಣಕ್ಕೆ ಕಾಂಗ್ರೆಸ್  ಕೋಮುವಾದದ ಲೇಪ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ , ಗಂಭೀರ ವಿಷಯಗಳನ್ನು ಬದಿಗಿಟ್ಟು , ಕ್ಷುಲ್ಲಕ ವಿಷಯವನ್ನು ಇಷ್ಟೊಂದು ದೊಡ್ಡದು ಮಾಡುವ ಅಗತ್ಯ ಏನು ? ಎಂದು ಪ್ರಶ್ನಿಸಿದ್ದು '' ಮಾಧ್ಯಮದವರಿಗೆ ಮತ್ತು ವಿರೋಧ ಪಕ್ಷಗಳಿಗೆ ಅತ್ಯಾಚಾರದಂತ ಘೋರ ಅಪರಾಧ ಸಹನೀಯ , ಆದರೆ ರೊಟ್ಟಿ ತಿನ್ನುವುದು ಮಾತ್ರ ಸಹ್ಯವಲ್ಲ'' ಎಂದು ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರ ಸದನದಲ್ಲಿ ಜುಲೈ 17 ರಂದು ಶಿವಸೇನೆ ಸಂಸದ, ಠಾಣೆಯ ಮಾಜಿ ಮೇಯರ್ ರಾಜನ್ ವಿಚಾರೆ , ರಮ್ಜಾನ್ ಉಪವಾಸದಲ್ಲಿದ್ದ, ಮುಸ್ಲಿಂ ಸಿಬ್ಬಂದಿ ಅಶ್ರಫ್ ಜುಹೇರ್ ಎಂಬಾತನಿಗೆ ಬಲವಂತವಾಗಿ ಚಪಾತಿ ತಿನ್ನಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿರುವ ಉದ್ಧವ್, ''ಯಾರಿಗೂ ಆತ ಮುಸ್ಲಿಂ ಎಂಬ ವಿಷಯ ತಿಳಿದಿರಲಿಲ್ಲ , ತಾನು ಮುಸ್ಲಿಂ ಎಂದು ಆತ ತನ್ನ ಮುಖದ ಮೇಲೆ ಬರೆದುಕೊಂಡಿರಲಿಲ್ಲ,'' ಎಂದು ಕುಹಕವಾಡಿದ್ದಾರೆ. 
 
ಪಕ್ಷದ ಮುಖವಾಣಿಯಾದ 'ಸಾಮ್ನಾ'ದ ಸಂಪಾದಕೀಯದಲ್ಲಿ, ತಮ್ಮ ಆಕ್ರೋಶವನ್ನು ಹರಿಯ ಬಿಟ್ಟಿರುವ ಠಾಕ್ರೆ '' ಪ್ರಸ್ತುತ ನಡೆಯುತ್ತಿರುವ ಪವಿತ್ರ ರಮ್ಜಾನ್ ಮಾಸದಲ್ಲಿಯೇ ಮುಸ್ಲಿಂ ಧರ್ಮೀಯ ಶಾಲಾ ಶಿಕ್ಷಕನೊಬ್ಬ ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದ ಚಿಕ್ಕ ಬಾಲೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಪವಿತ್ರ ದಿನಗಳಲ್ಲಿಯೇ ಅಫಘಾನಿಸ್ತಾನದ ಮಸೀದಿಯೊಂದರಲ್ಲಿ ಮೌಲ್ವಿಯೊಬ್ಬರು 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಮಾಧ್ಯಮದವರಿಗೆ ಮತ್ತು ರಾಜಕೀಯ ಪಕ್ಷಗಳಿಗೆ  ಇಂತಹ ಗಂಭೀರ ವಿಷಯಗಳು ಕಾಣುತ್ತಿಲ್ಲ. ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ ಈ ವಿಷಯಗಳ ಕುರಿತು ಯಾರು ಕೂಡ ಕೂಗಾಡುತ್ತಿಲ್ಲ. ವಿರೋಧ ವ್ಯಕ್ತ ಪಡಿಸುತ್ತಿಲ್ಲ ಇವರಿಗೆಲ್ಲ ಅತ್ಯಾಚಾರದಂತ ಘೋರ ಅಪರಾಧ ಸಹನೀಯ , ಆದರೆ, ರೋಟಿ ಮಾತ್ರ ಸಹ್ಯವಲ್ಲ'' ಎಂದು ಅಣಕಿಸಿದ್ದಾರೆ. 
 
''ರಾಷ್ಟ್ರ ರಾಜಧಾನಿಯಲ್ಲಿರುವ ಮಹಾರಾಷ್ಟ್ರ ಸದನದ ಸ್ಥಿತಿಯ ಬಗ್ಗೆ ಚರ್ಚಿಸಿರುವ ಅವರು, ಅಲ್ಲಿಯ ಸನ್ನಿವೇಶ ಗೋಶಾಲೆಗಿಂತಲೂ ಕೆಟ್ಟದಾಗಿದೆ. ಕಲಾವಿದರು ಹಾಗೂ ರಾಜ್ಯದ ಸಂಸದರಿಗೆ ಅಲ್ಲಿ ಜಾಗವೇ ಇಲ್ಲ. ಮಹಾರಾಷ್ಟ್ರ ಸದನದ ದುಸ್ಥಿತಿಯನ್ನು ವಿವರಿಸುವುದಷ್ಟೇ ನಮ್ಮ ಉದ್ದೇಶ, ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡುವುದಲ್ಲ'' ಎಂದು  ಹೇಳಿದ್ದಾರೆ. 
 
''ನಾವು ಹಿಂದುತ್ವದ ಅಜೆಂಡಾವನ್ನು ಹೊಂದಿರಬಹುದು. ಆದರೆ ಇತರರ ಧಾರ್ಮಿಕ ಭಾವನೆಗಳ ಜತೆ ನಾವು ಚೆಲ್ಲಾಟವಾಡುವುದಿಲ್ಲ. ಶಿವಸೇನೆ  ಯಾರ ಧಾರ್ಮಿಕ ಭಾವನೆಗಳಿಗೂ ಅಡ್ಡಿ ಉಂಟು ಮಾಡಬಯಸುವುದಿಲ್ಲ'' ಎಂದಿರುವ ಅವರು ''ಸೂಕ್ಷ್ಮ ವಿಷಯಕ್ಕೆ ರಾಜಕೀಯ ಬಣ್ಣ ನೀಡದಿರಿ'' ಎಂದು ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ