ಅತ್ಯಾಚಾರ ಪ್ರಕರಣ: ಕೊನೆಗೂ ಪರೀಕ್ಷೆಗೆ ಹಾಜರಾಗದ ರಾಘವೇಶ್ವರ ಶ್ರೀ

ಬುಧವಾರ, 30 ಸೆಪ್ಟಂಬರ್ 2015 (13:49 IST)
ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತಿ ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿ ಇಂದು ಪರೀಕ್ಷೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಸಿಐಡಿ ಪೊಲೀಸರು ಕೊನೆಗೂ ಆಸ್ಪತ್ರೆಯಿಂದ ಬರಿಗೈಯ್ಯಲ್ಲಿ ವಾಪಾಸಾಗಿದ್ದಾರೆ. 
 
ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರೂ ಕೂಡ ಶ್ರೀಗಳು ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗಲಿಲ್ಲ. ಅಲ್ಲದೆ ಶ್ರೀಗಳು ಹಾಜರಾಗುವುದಿಲ್ಲ ಎಂಬ ಬಗ್ಗೆ ಅಧಿಕೃತ ಮಾಹಿತಿ ಪಡೆದ ಪೊಲೀಸರು, ಬಂದ ದಾರಿಗೆ ಸಂಕವಿಲ್ಲ ಎಂಬಂತೆ ಬರಿಗೈಯ್ಯಲ್ಲಿ ಹಿಂದಿರುಗಿದ್ದಾರೆ. ಶ್ರೀಗಳು ಪರೀಕ್ಷೆಗೊಳಪಡಲಿದ್ದಾರೆ ಎಂಬ ಕಾರಣದಿಂದ ತನಿಖಾಧಿಕಾರಿ ಬಿ.ಎಸ್.ಅಶೋಕ್ ಕುಮಾರ್ ನೇತೃತ್ವದಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಸಿದ್ಧತೆಗಳೊಂದಿಗೆ ಸೂಕ್ತ ಭದ್ರತೆ ಕಾಯ್ದುಕೊಳ್ಳಲಾಗಿತ್ತು. 
 
ಇನ್ನು ಶ್ರೀಗಳು ಪರೀಕ್ಷೆಗೆ ಹಾಜರಾಗುವುದಿಲ್ಲ ಎಂಬ ವಿಷಯವನ್ನು ಮಠದ ಮಹಾಮಂಡಲದ ಅಧ್ಯಕ್ಷ ವೈ.ವಿ.ಕೃಷ್ಣಮೂರ್ತಿ ಅವರು ದೃಢಪಡಿಸಿದ್ದು, ನಾವು ಕಾನೂನಿಗೆ ತಲೆ ಬಾಗುತ್ತೇವೆ. ಆದರೆ ಶ್ರೀಗಳು ವಿಶೇಷ ಪೂಜೆಗಳನ್ನು ಮಾಡಿ ಬಸವಳಿದಿರುವ ಕಾರಣ ಪರೀಕ್ಷೆಗೆ ಹಾಜರಾಗಿಲ್ಲ. ಮುಂದೆ ಕಾನೂನು ತಜ್ಞರ ಸಲಹೆ ಪಡೆದು ಮು್ನನಡೆಯಲಿದ್ದೇವೆ. ಬರುವುದಿಲ್ಲ ಎಂಬ ಬಗ್ಗೆ ಈಗಾಗಲೇ ಪತ್ರ ಮುಖೇನ ತನಿಖಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದೇವೆ ಎಂದು ತಿಳಿಸಿದರು. 
 
ಇನ್ನು ಮಠದ ರಾಮಕಥಾ ಗಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೇಮಲತಾ ಎಂಬುವವರು ಶ್ರೀಗಳು ತಮ್ಮ ಮೇಲೆ ರಾಮನ ಅವತರಣಿಕೆ ಎಂದು ನಂಬಿಸಿ 169 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು, ನೋಟಿಸ್ ಜಾರಿಗೊಳಿಸಿದ್ದರು. ಅಲ್ಲದೆ ನೋಟಿಸ್‌ನಲ್ಲಿ ಇಂದು ಬೆಳಗ್ಗೆ ಒಂಭತ್ತು ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿ ದೈಹಿಕ, ಪುರುಷತ್ವ ಹಾಗೂ ವೀರ್ಯ ಪರೀಕ್ಷೆಗೆ ಸಹಕರಿಸುವಂತೆ ಸೂಚಿಸಿದ್ದರು.  

ವೆಬ್ದುನಿಯಾವನ್ನು ಓದಿ