ರೇಪ್ ಪೀಡಿತ ಅಪ್ರಾಪ್ತಳಿಗೆ ಆಶ್ರಯದ ಭರವಸೆ ನೀಡಿ ಬೀದಿಗೆ ತಳ್ಳಿದ ಸರಕಾರ

ಶನಿವಾರ, 2 ಆಗಸ್ಟ್ 2014 (11:08 IST)
ಕಳೆದ ಕೆಲ ತಿಂಗಳುಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ನೊಂದಿದ್ದ ಪೀಡಿತಳ ರಕ್ಷಣೆಯ ಹೊಣೆ ಹೊತ್ತಿದ್ದ ಬಾಲ ಮಂದಿರ, ಈಗ ಅಚಾನಕ್ ಆಗಿ ಆಕೆಯನ್ನು ಹೊರ ತಳ್ಳಿದ್ದು ಬಾಲಕಿ ಬಡತನದಿಂದ ನರಳುತ್ತಿರುವ ತಾಯಿಯ ಬಳಿ ಮರಳಿದ್ದಾಳೆ ಎಂದು ವರದಿಯಾಗಿದೆ. 

ಕಳೆದ ಕೆಲ ತಿಂಗಳುಗಳ ಹಿಂದೆ ಹಾಸನದ ಅರಕಲಗೂಡಿನಲ್ಲಿ ನಡೆದ ಘಟನೆಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಅತ್ಯಾಚಾರಕ್ಕೊಳಗಾಗಿ  ಗರ್ಭಿಣಿಯಾಗಿದ್ದಳು. ಮೊದಲು ತನ್ನ ತಂದೆ ಈ ಕೃತ್ಯ ಎಸಗಿದ್ದಾನೆ ಎಂದಿದ್ದ ಬಾಲಕಿ ನಂತರ ತಮ್ಮೂರಿನ ಹರೀಶ್ ಎಂಬಾತನ ಮೇಲೆ ಆರೋಪ ಹೊರಿಸಿದ್ದಳು. ಆ ಸಮಯದಲ್ಲಿ ಆಕೆಯ ಸಹಾಯಕ್ಕೆ ಬಂದಿದ್ದ ಜಿಲ್ಲಾಡಳಿತ ಆಕೆಯ ಗರ್ಭಪಾತ ಮಾಡಿಸಿ ಆಕೆಯನ್ನು ಬಾಲಮಂದಿರದ ಸುಪರ್ದಿಗೆ ಬಿಟ್ಟಿತ್ತು.
 
ಬಡತನದಲ್ಲಿ ನರಳುತ್ತಿದ್ದ ಕುಟುಂಬ ಮಗಳ ರಕ್ಷಣೆಯನ್ನು ಸರಕಾರ ಹೊತ್ತಿದ್ದರಿಂದ ನಿಟ್ಟುಸಿರು ಬಿಟ್ಟಿತ್ತು. ಆದರೆ ಈಗ ಒಂದು ತಿಂಗಳ ನಂತರ ಆಕೆಯನ್ನು ಬಾಲ ಮಂದಿರದಿಂದ ಏಕಾಯೇಕಿಯಾಗಿ ಹೊರ ತಳ್ಳಲಾಗಿದೆ. 
 
ಆಕೆಯ ತಂದೆ ಅತ್ಯಾಚಾರದ ಆರೋಪದ ಮೇಲೆ ಜೈಲಿನಲ್ಲಿದ್ದು, ತಾಯಿಯೊಬ್ಬಳೇ ಆಕೆಯ ಜವಾಬ್ದಾರಿಯನ್ನು ಹೊರಲಾಗದ ಸ್ಥಿತಿಯಲ್ಲಿದ್ದಾಳೆ. ಪ್ರಕರಣ ಬೆಳಕಿಗೆ ಬಂದಿದ್ದ ಸಮಯದಲ್ಲಿ ಆಕೆಯ ಮನೆಗೆ ತೆರಳಿ ರಕ್ಷಣೆಯ ಭರವಸೆ ನೀಡಿದ್ದ ಗೃಹ ಮಂತ್ರಿ ಭರವಸೆ ಅರ್ಥವಿಲ್ಲದ್ದೆನಿಸಿದೆ. ಆಕೆಗೆ ನೀಡುತ್ತೆವೆಂದ 10,000 ರೂಪಾಯಿ ತಕ್ಷಣದ ಪರಿಹಾರ ಧನ ಕೂಡಾ ಆಕೆಯ ತಾಯಿ ಕೈ ಸೇರಿಲ್ಲ. ಅಲ್ಲದೇ ಆಕೆಗೆ 1 ಲಕ್ಷ ರೂಪಾಯಿ ಧನಸಹಾಯ ಮಾಡುತ್ತೇವೆಂದು ಹೇಳಿದ್ದ ಸರಕಾರದ ಆಶ್ವಾಸನೆ ಈಗ ಆ ಸಮಯಕ್ಕೆ ಹಚ್ಚಿದ ತೇಪೆ ಎನಿಸಿದೆ. ಆಕೆಯ ಶಿಕ್ಷಣದ ಜವಾಬ್ದಾರಿ ಹೊರುತ್ತೇನೆಂದಿದ್ದ ಮಕ್ಕಳ ಕಲ್ಯಾಣ ಇಲಾಖೆ ವಾಗ್ದಾನ ಕೂಡ ವಾಗ್ದಾನವಾಗಿ ಉಳಿದಿದೆ. 
 
ಬಾಯಿ ಬಿಟ್ಟರೆ ಮಹಿಳಾ ರಕ್ಷಣೆ ನಮ್ಮ ಹೊಣೆ ಎಂದು ಭರವಸೆ ನೀಡುವ ಮುಖ್ಯಮಂತ್ರಿಯವರ ಆಶ್ವಾಸನೆ ಕೇವಲ ಬಾಯಿಮಾತಿನದ್ದು ಎಂದು ಈ ಘಟನೆ ಉದಾಹರಣೆಯಾಗಿದೆ.

ವೆಬ್ದುನಿಯಾವನ್ನು ಓದಿ