ಡಾಲರ್‌ಗಳಿಗಿಂತ ಮುಖ್ಯವಾಗಿ ನಾವು ಜ್ಞಾನ ಮತ್ತು ಕೌಶಲ್ಯ ವೃದ್ಧಿಯಲ್ಲಿ ಹೆಚ್ಚು ಆಸಕ್ತರಾಗಬೇಕು :ಮೋದಿ

ಗುರುವಾರ, 24 ಜುಲೈ 2014 (18:00 IST)
ಭಾರತದ ಪ್ರವಾಸದಲ್ಲಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ  ಜಿಮ್ ಯೊಂಗ್ ಕಿಮ್  ಜತೆ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕುಶಲ ಮಾನವ ಸಂಪನ್ಮೂಲದ ತಳಹದಿಯನ್ನು ಅಭಿವೃದ್ಧಿ ಪಡಿಸಬೇಕಾಗಿರುವುದರಿಂದ ನಮಗೆ ಹಣಕ್ಕಿಂತ ಮುಖ್ಯವಾಗಿ ಹೊಸ ಹೊಸ ಕಲ್ಪನೆಗಳು,,ಜ್ಞಾನ ಮತ್ತು ಪರಿಣಿತರ ಅಗತ್ಯವಿದೆ ಎಂದು ಹೇಳಿದ್ದಾರೆ.  

ದೆಹಲಿಯಲ್ಲಿ ಕಿಮ್  ಅವರ ಜತೆ ಸಭೆ ನಡೆಸಿದ ಮೋದಿಯವರು ಗಂಗಾ ಶುದ್ಧೀಕರಣ ಯೋಜನೆ ವಿಶ್ವ ಬ್ಯಾಂಕಿಗೆ ಒಂದು ಅತ್ಯಂತ ಸ್ಪೂರ್ತಿದಾಯಕ ಯೋಜನೆಯಾಗಬಹುದು ಎಂದು ಹೇಳಿದರು.
 
"ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಜತೆಗಿನ ನನ್ನ ಸಭೆ ಅತ್ಯಂತ ಫಲಪ್ರದವಾಗಿತ್ತು. ಭವಿಷ್ಯದಲ್ಲಿ ಕಾರ್ಯರೂಪಕ್ಕೆ ತರಬೇಕಾದ ಅನೇಕ ಯೋಜನೆಗಳಲ್ಲಿ  ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ನಾವು ಚರ್ಚಿಸಿದೆವು"  ಎಂದು ಮೋದಿ ಹೇಳಿದ್ದಾರೆ. 
 
ಹಣದ ಮಹತ್ವ ಮತ್ತು ಜನರ ಸ್ಫೂರ್ತಿಯನ್ನು ಹೆಚ್ಚಿಸುವ ಮತ್ತು ಅವರ ಜೀವನವನ್ನು ಧನಾತ್ಮಕವಾಗಿ ಬದಲಿಸುವ ಹಣದ ಕುರಿತು ಕೆಲಸ ಮಾಡಬೇಕಾದ ಅವಶ್ಯಕತೆಯ ಬಗೆಗಿನ ಚರ್ಚೆಗೆ ನಾವು ಒತ್ತು ನೀಡಿದೆವು ಎಂದು ತಮ್ಮ ಸರಣಿ ಟ್ವಿಟ್ಟರ್‌ಗಳಲ್ಲಿ ಮೋದಿಯವರು ಹೇಳಿಕೊಂಡಿದ್ದಾರೆ. 
 
ಡಾಲರ್‌ಗಳಿಗಿಂತ ಮುಖ್ಯವಾಗಿ ನಾವು ಜ್ಞಾನ ಮತ್ತು ಕೌಶಲ್ಯ ವೃದ್ಧಿಯಲ್ಲಿ ಹೆಚ್ಚು ಆಸಕ್ತರಾಗಬೇಕು ಎಂಬ ನನ್ನ ನಿಲುವನ್ನು ಡಾ. ಕಿಮ್ ಒಪ್ಪಿಕೊಂಡಿದ್ದಾರೆ. ವಿಶ್ವಬ್ಯಾಂಕ್ ನಮ್ಮ ಪಾಲಿಗೆ ಮಾಹಿತಿಯ ಬ್ಯಾಂಕ್ ಆಗಲಿದೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.    
 
"ನಾವು ವಿಶ್ವಬ್ಯಾಂಕ್‌ನಿಂದ  ಸಮೂಹ ಉತ್ಪಾದನೆಯನ್ನಷ್ಟೇ ಬಯಸುತ್ತಿಲ್ಲ. ಜತೆಗೆ ಜನಸಾಮಾನ್ಯರಿಂದ ಉತ್ಪಾದನೆಯನ್ನು ಕೂಡ ಬಯಸುತ್ತೇವೆ , ಅದರಿಂದ ನಮ್ಮ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ .ಇಂದು  ವಿಶ್ವ ತನ್ನ ಗಮನವನ್ನು ವಸ್ತುಗಳ ವ್ಯಾಪಾರದಲ್ಲಿ ಕೇಂದ್ರೀಕರಿಸಿದೆ. ಭವಿಷ್ಯದಲ್ಲಿ  ಕುಶಲ ಉದ್ಯೋಗಿಗಳನ್ನು ಪಡೆಯುವುದೇ ದೊಡ್ಡ ಸಮಸ್ಯೆಯಾಗಲಿದೆ. ನಾವು ಈ ದಿಕ್ಕಿನಲ್ಲಿ ಕೆಲಸ ಮಾಡಬೇಕು" ಎಂದು ಮೋದಿ ಹೇಳಿದ್ದಾರೆ. 
 
ವಿಶ್ವಬ್ಯಾಂಕ್ ಅಡಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ವೇಗದ ಅನುಷ್ಠಾನಕ್ಕೆ ಒತ್ತು ನೀಡುವ ಬಗ್ಗೆಯೂ ಮೋದಿ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ