ಗೋಮಾತೆಯ ರಕ್ಷಣೆಗಾಗಿ ಹತ್ಯೆಗೂ ಸೈ ಪ್ರಾಣ ಕೊಡಲು ಸೈ: ಬಿಜೆಪಿ ಶಾಸಕ

ಮಂಗಳವಾರ, 1 ಡಿಸೆಂಬರ್ 2015 (17:48 IST)
ಗೋಮಾಂಸದ ಹಬ್ಬವನ್ನು ವಿರೋಧಿಸಿದ ಬಿಜೆಪಿ ಶಾಸಕ ರಾಜಾ ಸಿಂಘ್, ಇದೊಂದು ರಾಜಕೀಯ ಸಂಚಾಗಿದೆ. ಗೋಮಾತೆ ರಕ್ಷಣೆಗಾಗಿ ಹತ್ಯೆ ಮಾಡಲು ಸಿದ್ದ ಪ್ರಾಣ ಕೊಡಲು ಸಿದ್ದ ಎಂದು ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ. 
 
ಹೈದ್ರಾಬಾದ್‌ನ ಏಕೈಕ ಗೋಶಾಮಹಲ್ ವಿಧಾನಸಬಾ ಕ್ಷೇತ್ರದ ಶಾಸಕ ರಾಜಾ ಸಿಂಗ್, ಗೋಮಾಂಸ ಪಾರ್ಟಿ ಆಯೋಜಿಸಿದ ಆಯೋಜಕರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಬಾರದು, ಪ್ರತಿಯೊಬ್ಬರಿಗೆ ತಾವು ಬಯಸಿದ ಆಹಾರ ತಿನ್ನುವ ಹಕ್ಕಿದೆ. ಆದರೆ, ಹಕ್ಕಿನ ಸ್ವಾತಂತ್ರ್ಯದ ಹೆಸರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.  
 
ಗೋವಿನ ರಕ್ಷಣೆಗಾಗಿ ಹತ್ಯೆ ಮಾಡಲು ಸಿದ್ದರಿದ್ದೇವೆ. ಪ್ರಾಣ ಕೊಡಲು ಕೂಡಾ ಸಿದ್ದರಾಗಿದ್ದೇವೆ. ಗೋಹತ್ಯೆ ಮಾಡುವವರನ್ನು ತಡೆಯುವ ಹಕ್ಕು ನಮಗಿದೆ. ಗೋಮಾಂಸದ ಪಾರ್ಟಿ ಆಯೋಜನೆ ರಾಜಕೀಯ ಸಂಚು ಎಂದು ಆರೋಪಿಸಿದ್ದಾರೆ.
 
ಇಂತಹ ಪಾರ್ಟಿಗಳ ಆಯೋಜನೆಯಿಂದ ದಾದ್ರಿ ಹತ್ಯೆಯಂತಹ ಘಟನೆ ಮತ್ತು ತೆಲಂಗಾಣದಲ್ಲಿ ಮರುಕಳಿಸಬಹುದು. ಹಿಂದೂಗಳಾಗಿ ಗೋಮಾಂಸದ ಹಬ್ಬವನ್ನು ತಡೆಯಬೇಕಾಗಿದೆ ಎಂದು ಕರೆ ನೀಡಿದರು.
 
ತೆಲಂಗಾಣ ಸರಕಾರ ಪರೋಕ್ಷವಾಗಿ ಗೋವಧೆ ಕೇಂದ್ರಗಳಿಗೆ ಕುಮ್ಮಕ್ಕು ನೀಡುತ್ತಿದೆ.ನಾವು ಶಿವಾಜಿ ಮಹಾರಾಜ್‌ರನ್ನು ನಂಬುತ್ತೇವೆ. ಲಾತೋ ಕಿ ಭೂತ್ ಬಾತೋ ಸೇ ನಹೀ ಮಾನ್ತೆ ಎನ್ನುವ ಕಾನೂನು ನಮ್ಮದು. ಆಯೋಜಕರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದ್ದಾರೆ.
 
ನನ್ನ ಹೇಳಿಕೆಯನ್ನು ಬಿಜೆಪಿ ಬೆಂಬಲಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಗೋಮಾಂಸ ಹಬ್ಬವನ್ನು ಸದಾ ವಿರೋಧಿಸುತ್ತೇನೆ. ನಾನು ಮೊದಲು ಹಿಂದೂ ನಂತರ ಬಿಜೆಪಿ ಎಂದು ಕಿಡಿಕಾರಿದ್ದಾರೆ.
 
ಕೆಲ ವಿದ್ಯಾರ್ಥಿ ಸಂಘಟನೆಗಳು ಡಿಸೆಂಬರ್ 10 ರಂದು ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಹಬ್ಬ ಆಚರಿಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ, ವಿಎಚ್‌ಪಿ ಮತ್ತು ಹಿಂದೂ ಜನಜಾಗೃತಿ ಸಮಿತಿಗಳು ರಾಜೇಂದ್ರ ಸಿಂಗ್ ಲೋಧ್ ನೇತೃತ್ವದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಉಪಕುಲಪತಿ ರಂಜೀವ್ ಆರ್.ಆಚಾರ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು ಗೋಮಾಂಸ ಹಬ್ಬ ಆಚರಿಸಿದಂತೆ ಕಟ್ಟು ನಿಟ್ಟಿನ ಆದೇಶ ನೀಡುವಂತೆ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ