ನೇಮಕಾತಿ ಹಗರಣ: ರಾಜ್ಯಪಾಲರ ವಿರುದ್ಧವೇ ಎಫ್‌ಐಆರ್ ದಾಖಲು

ಮಂಗಳವಾರ, 24 ಫೆಬ್ರವರಿ 2015 (16:09 IST)
ವೃತ್ತೀಪರ ಶಿಕ್ಷಣ ಮಂಡಳಿಯಲ್ಲಿನ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಜ್ಯದ ರಾಜ್ಯಪಾಲರೋರ್ವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಎದುರಿಸಬೇಕಾಂದತಹ ಅಪರೂಪ ಸಂದರ್ಭ ಎದುರಾಗಿದೆ. 
 
ಮಧ್ಯಪ್ರದೇಶ ರಾಜ್ಯದ ವೃತ್ತೀಪರ ಶಿಕ್ಷಣ ಮಂಡಳಿಯಲ್ಲಿನ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಿರುದ್ಧ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ದೂರು ದಾಖಲಿಸಿಕೊಂಡಿದ್ದಾರೆ. 
 
ಈ ಶಿಕ್ಷಣ ಮಂಡಳಿ ಅಡಿಯಲ್ಲಿ ಒಟ್ಟು 3,58,490 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಇದರಲ್ಲಿ 228 ಮಂದಿಯ ನೇಮಕಾತಿಯಲ್ಲಿ ಬೃಹತ್ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರಾಗಿದ್ದ ಲಕ್ಷ್ಮಿಕಾಂತ್ ಅವರನ್ನೂ ಸೇರಿದಂತೆ ಈ ಹಿಂದೆಯೇ 129 ಮಂದಿ ವಿರುದ್ಧ ದೂರು ದಾಖಲಿಸಲಾಗಿತ್ತು. ಪ್ರಸ್ತುತ ರಾಜ್ಯಪಾಲರ ವಿರುದ್ಧವೂ ದೂರು ದಾಖಲಿಸಲಾಗಿದ್ದು, ರಾಜ್ಯಪಾಲರೂ ಸೇರಿ ಪ್ರಸ್ತುತ 130 ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ.  
 
ಇನ್ನು ರಾಜ್ಯಪಾಲರು ಸಂವಿಧಾನದ ಪದವಿಯನ್ನು ಅಲಂಕರಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಾದಲ್ಲಿ ಮೊದಲು ರಾಷ್ಟ್ರಪತಿಗಳಿಂದ ಅನುಮತಿ ಪಡೆಯಬೇಕು. ಆ ಬಳಿಕ ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆದು ನಂತರವಷ್ಟೇ ದೂರು ದಾಖಲಿಸಬೇಕು. ಅಂತೆಯೇ ಯಾದವ್ ಅವರ ವಿರುದ್ಧ ದೂರು ದಾಖಲಿಸಲೂ ಕೂಡ ರಾಷ್ಟ್ರಪತಿಗಳಿಂದ ಅನುಮತಿ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ. ಈ ಮೂಲಕ ಎಫ್ಐಆರ್ ದಾಖಲಿಸಿಕೊಂಡ ಮೊದಲ ರಾಜ್ಯಪಾಲ ಎಂಬ ಹೆಸರಿಗೆ ಯಾದವ್ ಕಾರಣರಾಗಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಕೂಡ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದೆ ಎನ್ನಲಾಗಿದೆ. 
 
ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಯಾದವ್ ಅವರಿಗೆ ಈಗಾಗಲೇ ರಾಜ್ಯಪಾಲ ಪದವಿಯಿಂದ ಕೆಳಗಿಳಿಯಿರಿ ಎಂಬ ಸೂಚನೆ ಕೂಡ ಬರುತ್ತಿದೆ ಎನ್ನಲಾಗಿದೆ. ಇನ್ನು ಪ್ರಕರಣದ ಆರೋಪ ಕೇಳಿ ಬಂದಿದ್ದ ಮೊದಲಾರ್ಧದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಕರೆಸಿ ಖುದ್ದು ಪ್ರಕರಣ ಸಂಬಂಧ ಮಾತುಕತೆ ನಡೆಸಿದ್ದರು. 

ವೆಬ್ದುನಿಯಾವನ್ನು ಓದಿ