ತನ್ನದೇ ಮದುವೆ ದಿಬ್ಬಣವನ್ನೇ ಲೂಟಿ ಮಾಡಿಸಿದ ವಧು

ಗುರುವಾರ, 21 ಮೇ 2015 (11:33 IST)
ಚಿನ್ನಾಭರಗಳನ್ನು ದರೋಡೆ ಮಾಡಿದ ದುಷ್ಕರ್ಮಿಗಳ ಗುಂಪೊಂದು ವಧುವನ್ನು ಸಹ ಅಪಹರಿಸಿಕೊಂಡು ಹೋದ ಘಟನೆ ಹೊಸ ತಿರುವು ಪಡೆದುಕೊಂಡಿದೆ. ದುಷ್ಕರ್ಮಿಗಳಿಂದ ಅಪಹೃತಳಾಗಿದ್ದಾಳೆ ಎನ್ನಲಾದ ವಧುವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಘಟನೆಯ ಹಿಂದೆ ಆಕೆಯ ಕೈವಾಡವಿರುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಮಧ್ಯಪ್ರದೇಶ್- ಗುಜರಾತ್ ಗಡಿ ಪ್ರದೇಶದ (ಜಬುವಾ ಜಿಲ್ಲೆ) ಮಾಂಡ್ಲಾ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿತ್ತು. 150 ಜನರಿದ್ದ ದಿಬ್ಬಣ ಗುಜರಾತ್‌ನ ಗರ್ಬಾರಾದಿಂದ ಮಧ್ಯಪ್ರದೇಶದ ಮಾಂಡ್ಲಾಕ್ಕೆ ತೆರಳುತ್ತಿದ್ದ ವೇಳೆ ದಾಳಿ ಮಾಡಿದ ದರೋಡೆಕೋರರು ಚಿನ್ನಾಭರಣ, ನಗದು ಹಣವನ್ನು ದೋಚಿದ್ದರು. ಆ ಸಂದರ್ಭಧಲ್ಲಿ ವಧು ಇವರನ್ನು ನಾನು ಗುರುತಿಸಿದ್ದೇನೆ ಎಂದು ಕಿರುಚಿಕೊಂಡಿದ್ದಳು. ಆಗ ದರೋಡೆಕೋರರು ಆಕೆಯನ್ನು ಸಹ ಎತ್ತಿಕೊಂಡು ಪರಾರಿಯಾಗಿದ್ದರು. 
 
ಹೀಗಾಗಿ ಮದುಮಗಳು ಸುಮಿತ್ರಾಬೆನ್ ಅವರನ್ನು ಗುರುತಿಸಿದ್ದರಿಂದ ಆಕೆಯನ್ನು ಸಹ ಎಳೆದೊಯ್ಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು. 
 
ದರೋಡೆಕೋರರು ಬಳಸಿದ್ದ ಜೀಪ್‌ನ್ನು ವಶಪಡಿಸಿಕೊಂಡಿದ್ದ ಜಬುವಾ-ದಾಹೋಡ್ ಪೊಲೀಸರು, ವಧುವಿನ ಪತ್ತೆಗಾಗಿ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಅಲಿರಾಜಪುರದ ಆಜಾದ್ ನಗರ್ ಎಂಬಲ್ಲಿ ದರೋಡೆಕೋರರ ಬಳಿಯಿದ್ದ ಯುವತಿಯನ್ನು ಪತ್ತೆ ಹಚ್ಚಲಾಯಿತು. ಆಕೆ ಪೊಲೀಸರಿಗೆ ಸುಳ್ಳು ಕತೆಯನ್ನು ಸೃಷ್ಟಿ ಮಾಡಿ ಹೇಳಲು ಪ್ರಯತ್ನಿಸಿದಳಾದರೂ ಕಲ್ಯಾಣಪುರದ ಪೆಟ್ರೋಲ್ ಪಂಪ್ ಒಂದರಲ್ಲಿ ಅಳಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಆಕೆ  ದರೋಡೆಕೋರರಲ್ಲಿ ಇಬ್ಬರ ಜತೆ ಬೈಕ್ ಮೇಲೆ ಆರಾಮವಾಗಿ ಕುಳಿತುಕೊಂಡು ಹೋಗುತ್ತಿದ್ದ ದೃಶ್ಯಾವಳಿಗಳು ಸೆರೆಯಾಗಿದ್ದವು. ಇದು ಸತ್ಯವನ್ನು ಬಹಿರಂಗಗೊಳಿಸಿತು.
 
ಈಗ ವಧು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತಾನು ಪ್ರೀತಿಸಿದವನ ಜತೆ ಪರಾರಿಯಾಗಲು ಆಕೆ ಈ ರೀತಿಯ ತಂತ್ರವನ್ನು ರೂಪಿಸಿದ್ದಳು ಎಂಬ ಸತ್ಯ ಬಯಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಸಹ ಆಕೆ ಆತನ ಜತೆ ಪರಾರಿಯಾಗಲು ಪ್ರಯತ್ನಿಸಿದ್ದಳಾದರೂ ಯಶಸ್ವಿಯಾಗಿರಲಿಲ್ಲ. 
 
ಆಕೆಯ ಪ್ರೇಮಿಯನ್ನು ಬಂಧಿಸಲು ಪೊಲೀಸರು ಸಫಲರಾಗಿಲ್ಲ. 

ವೆಬ್ದುನಿಯಾವನ್ನು ಓದಿ