ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಖರ್ಚಾಗಿದ್ದು 17. 60ಲಕ್ಷ

ಸೋಮವಾರ, 21 ಜುಲೈ 2014 (13:44 IST)
ರಾಷ್ಟ್ರಪತಿ ಭವನದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭಕ್ಕೆ ಬರೋಬ್ಬರಿ 17. 60ಲಕ್ಷ ರೂಪಾಯಿಗಳು ಖರ್ಚಾಗಿವೆ ಎಂದು  ಮಾಹಿತಿ ಹಕ್ಕು ಕಾಯ್ದೆ ಮೂಲಕ ಬಹಿರಂಗವಾಗಿದೆ.

ರಾಷ್ಟ್ರಪತಿ ಆಡಳಿತ ಕಛೇರಿ ನೀಡಿದ ಪ್ರತ್ಯುತ್ತರದ ಪ್ರಕಾರ, ಪ್ರಮಾಣವಚನ ಸಮಾರಂಭಕ್ಕೆ ಮಾಡಿದ ವ್ಯವಸ್ಥೆ, ಭಾಗವಹಿಸಿದ್ದ 4017 ಅತಿಥಿಗಳ ವೆಚ್ಚ, ಟೆಂಟ್, ವೇದಿಕೆ , ಪೀಠೋಪಕರಣ ಮತ್ತು  ಸಂಬಂಧಿಸಿದ ಇತರ ವೆಚ್ಚವಾಗಿ  ಅಂದಾಜು , 17.6 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ತಿಳಿದು ಬಂದಿದೆ. 
 
ಆರ್‌ಟಿಐ ಕಾರ್ಯಕರ್ತ ರಮೇಶ್ ವರ್ಮಾ ಅವರ ಅರ್ಜಿಗೆ ಉತ್ತರ ನೀಡಿರುವ ರಾಷ್ಟ್ರಪತಿ ಆಡಳಿತ ಕಛೇರಿ ಕಾರ್ಯಕ್ರಮಕ್ಕೆ ಅನುಗುಣವಾಗಿ ನಾವು  ದಾಖಲೆಗಳನ್ನು ನಿರ್ವಹಿಸುವುದಿಲ್ಲ. ಆದ್ದರಿಂದ ಕೇಳಿರುವ ಮಾಹಿತಿಯನ್ನು ನಿಖರವಾಗಿ ನೀಡಲು ಸಾಧ್ಯವಿಲ್ಲ. ವಾರ್ಷಿಕ ಬಜೆಟ್‌ನಲ್ಲಿ ಆಯಾ ಸಮಾರಂಭಕ್ಕೆ ಆಗುವ ವೆಚ್ಚಗಳು ಮಂಜೂರಾಗುತ್ತವೆ ಎಂದು ಸಿಪಿಐಒ ಅಧಿಕಾರಿ ಸೌರಭ ವಿಜಯ್ ತಿಳಿಸಿದ್ದಾರೆ. 
 
ಮೋದಿ ಮತ್ತು  ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿರುವ ಎಲ್ಲರಿಗೆ ತಗಲಿರುವ ವೆಚ್ಚವೆಷ್ಟು ಎಂದು  ಕಾರ್ಯಕರ್ತ ರಮೇಶ್ ವರ್ಮಾ ರಾಷ್ಟ್ರಪತಿ ಆಡಳಿತ ಕಛೇರಿಯಿಂದ ಮಾಹಿತಿ ಕೇಳಿದ್ದರು. 
 
ಮೇ 26 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಸಮಾರಂಭದಲ್ಲಿ ಸಾರ್ಕ್ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಮತ್ತು ಹಿರಿಯ ನಾಯಕರು ಭಾಗವಹಿಸಿದ್ದರು. 

ವೆಬ್ದುನಿಯಾವನ್ನು ಓದಿ