10 ಅಥವಾ 10ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಹಿಂದು ಕುಟುಂಬಗಳಿಗೆ 21 ಸಾವಿರ ಬಹುಮಾನ: ಶಿವಸೇನೆ

ಸೋಮವಾರ, 27 ಅಕ್ಟೋಬರ್ 2014 (13:10 IST)
ಹಿಂದು ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ 10 ಅಥವಾ 10 ಕ್ಕಿಂತ ಹೆಚ್ಚು ಮಕ್ಕಳಿರುವ ಹಿಂದು ಕುಟುಂಬಗಳಿಗೆ 21 ಸಾವಿರ ರೂಪಾಯಿ ನಗದು ಬಹುಮಾನ ನೀಡುವುದಾಗಿ ಉತ್ತರಪ್ರದೇಶದ ಶಿವಸೇನೆ ಘಟಕ ಘೋಷಿಸಿದೆ.
 
ರಾಷ್ಟ್ರೀಯ ಹಿತಾಸಕ್ತಿಗಾಗಿ 10 ಅಥವಾ 10 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಹಿಂದು ಕುಟುಂಬಗಳಿಗೆ ಪ್ರಮಾಣ ಪತ್ರ ನೀಡಲು ಶಿವಸೇನೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಅನಿಲ್ ಶಾ ಸುದ್ದಿಗಾರರೊಂದಿಗೆ ಮಾತನಾಡಿ, 10 ಅಥವಾ 10 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಹಿಂದು ಕುಟುಂಬಗಳನ್ನು ಪತ್ತೆ ಮಾಡುವಂತೆ ಜಿಲ್ಲಾ ಘಟಕಗಳ ಅಧ್ಯಕ್ಷರುಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. 
 
ಹಿಂದು ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 1 ರಂದು ಫ್ಯಾಮಿಲಿ ಪ್ಲ್ಯಾನಿಂಗ್ ವೈದ್ಯಕೀಯ ಕೇಂದ್ರಗಳನ್ನು ಬಂದ್‌ ಮಾಡುವಂತೆ ಕಾರ್ಯಕರ್ತರಿಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.
 
ಹಿಂದು ಪುರುಷರಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದಲು ಅವಕಾಶ ನೀಡದಿರುವುದು ಕೆಲ ದುಷ್ಟ ಶಕ್ತಿಗಳ ಸಂಚಿನ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.  
 
ಕಳೆದ ಏಳು ವರ್ಷಗಳ ಹಿಂದೆ ಶಿವಸೇನೆ ಇಂತಹ ಪ್ರಚಾರ ಕಾರ್ಯ ಕೈಗೊಂಡಿತ್ತು. ಆ ಸಮಯದಲ್ಲಿ 10 ಅಥವಾ 10ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಹಿಂದು ಕುಟುಂಬಗಳಿಗೆ 10 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗಿತ್ತು ಎಂದು ಶಿವಸೇನೆಯ ಉತ್ತರ ಪ್ರದೇಶ ಘಟಕದ ರಾಜ್ಯಾಧ್ಯಕ್ಷ ಅನಿಲ್ ಶಾ ತಿಳಿಸಿದ್ದಾರೆ.  
 
 

ವೆಬ್ದುನಿಯಾವನ್ನು ಓದಿ