ದೇವಾಲಯ ನೆಲಸಮ: ಸಿಎಂ ವಸುಂಧರಾ ರಾಜೇ ಔರಂಗಜೇಬ್‌ನಂತೆ ಎಂದ ಆರೆಸ್ಸೆಸ್

ಮಂಗಳವಾರ, 7 ಜುಲೈ 2015 (16:21 IST)
ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ವಸುಂಧರಾ ರಾಜೇ ನೇತೃತ್ವದ ಸರಕಾರ ಮತ್ತು ಆರೆಸ್ಸೆಸ್ ಸಂಬಂಧ ಹಳಸಿದಂತಾಗಿದೆ. ದೇವಾಲಯಗಳನ್ನು ನಾಶಗೊಳಿಸುತ್ತಿರುವ ಮುಖ್ಯಮಂತ್ರಿ ವನಸುಂಧರಾ ರಾಜೇ ಆಧುನಿಕ ಔರಂಗಜೇಬ್‌ ಎಂದು ಆರೆಸ್ಸೆಸ್ ವಾಗ್ದಾಳಿ ನಡೆಸಿದೆ. 
 
ಜೈಪುರದಲ್ಲಿನ ಸ್ಥಳೀಯ ಅಡಳಿತ ಮತ್ತು ಮೆಟ್ರೋ ಅಧಿಕಾರಿಗಳು 86 ಬೃಹತ್ ಮತ್ತು ಸಣ್ಣ ದೇವಾಲಯಗಳನ್ನು ನೆಲಸಮಗೊಳಿಸಿರುವುದು ಆರೆಸ್ಸೆಸ್ ಕೆಂಗೆಣ್ಣಿಗೆ ಗುರಿಯಾಗಿದೆ
 
ಆರೆಸ್ಸೆಸ್ ಮತ್ತು ಕೆಲ ಹಿಂದೂ ಸಂಘಟನೆಗಳು ದೇವಾಲಯಗಳನ್ನು ನೆಲಸಮಗೊಳಿಸಿರುವುದು ವಿರೋಧಿಸಿ ಎರಡು ಗಂಟೆಗಳ ಕಾಲ ಚಕ್ಕಾ ಜಾಮ್ ಪ್ರತಿಭಟನೆ ನಡೆಸಿದ್ದವು.ಲಲಿತ್ ಮೋದಿ ವಿವಾದದಲ್ಲಿ ಕಂಗಾಲಾಗಿರುವ ರಾಜೇಯವರಿಗೆ ಆರೆಸ್ಸೆಸ್ ವಾಗ್ದಾಳಿ ಮತ್ತೊಂದು ಸಂಕಟಡ ತಂದಿದೆ. 
 
ದೇಶದಲ್ಲಿರುವ ಹಲವಾರು ದೇವಾಲಯಗಳನ್ನು ನಾಶಮಾಡಿದ ಮೊಘಲ್ ದೊರೆ ಔರಂಗಜೇಬ್‌ನಂತೆ ಮುಖ್ಯಮಂತ್ರಿ ವಸುಂಧರಾ ರಾಜೇ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಸರಕಾರದ ಮುಖ್ಯಮಂತ್ರಿ ರಾಜೇ ವಿರುದ್ಧವೇ ಆರೆಸ್ಸೆಸ್ ಮತ್ತು ಹಿಂದು ಸಂಘಟನೆಗಳು ಕಿಡಿಕಾರಿವೆ.
 
ಆರೆಸ್ಸೆಸ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೆಲ ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ರಾಜ್ಯದ ವೈದ್ಯಕೀಯ ಮತ್ತು ಆರೋಗ್ಯ ಖಾತೆ ಸಚಿವ ರಾಜೇಂದ್ರ ರಾಥೋಡ್ ಹೇಳಿದ್ದಾರೆ.
 
ಕಳೆದ ಕೆಲ ತಿಂಗಳುಗಳಿಂದ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಥಳೀಯ ಜಿಲ್ಲಾಡಳಿತ 86 ದೇವಾಲಯಗಳನ್ನು ನಾಶಪಡಿಸಿದ್ದಲ್ಲದೇ ಕೆಲವನ್ನು ಸ್ಥಳಾಂತರಗೊಳಿಸಿದೆ. 
 
ಮೆಟ್ರೋ ರೈಲು ನಿರ್ಮಾಣದ ಅಧಿಕಾರಿಗಳು 200 ವರ್ಷಗಳಷ್ಟು ಹಳೆಯದಾದ ರೋಜ್‌ಗಾರೇಶ್ವರ್ ಮಹಾದೇವ್ ಮತ್ತು ಕಶ್ತಾರನ್ ಮಹಾದೇವ್ ದೇವಾಲಯಗಳನ್ನು ನಾಶ ಮಾಡಿರುವುದು ಆರೆಸ್ಸೆಸ್ ನಾಯಕರ ಕೋಪಕ್ಕೆ ಕಾರಣವಾಗಿದೆ. 
 

ವೆಬ್ದುನಿಯಾವನ್ನು ಓದಿ