ಮೋಹನ್ ಭಾಗವತ್ ಕೇಂದ್ರ ಸರ್ಕಾರದ ರಿಯಲ್ ಬಾಸ್: ಕಾಂಗ್ರೆಸ್

ಗುರುವಾರ, 3 ಸೆಪ್ಟಂಬರ್ 2015 (15:32 IST)
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಾಗವತ್  ಕೇಂದ್ರ ಸರ್ಕಾರದ ನಿಜವಾದ 'ಬಾಸ್' ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಗುರುವಾರ ಹೇಳಿದ್ದಾರೆ.

 
'ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿರಬಹುದು. ಆದರೆ ವಾಸ್ತವವೆಂದರೆ ನಿಜವಾದ ಬಾಸ್ ಮೋಹನ್ ಭಾಗವತ್', ಎಂದು ತಿವಾರಿ ವ್ಯಂಗ್ಯವಾಡಿದ್ದಾರೆ.
 
ಆರ್‌ಎಸ್‌ ಎಸ್ - ಬಿಜೆಪಿ ಸಮನ್ವಯ ಸಭೆಯ ವಿರುದ್ಧ ವಾಗ್ದಾಳಿ ನಡೆಸಿದ ತಿವಾರಿ, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ  ಸಂಘ ಮತ್ತು ಉದ್ಯಮಪತಿಗಳ ಕೈಯಲ್ಲಿರುವ ಸೂತ್ರದ ಗೊಂಬೆಯಂತೆ', ಎಂದು ಅಣಕವಾಡಿದ್ದಾರೆ
 
"ಮೋದಿ ನೇತೃತ್ವದ ಸರ್ಕಾರ ಎರಡು ದಾರಗಳ ಹಿಡಿತದಲ್ಲಿ  ಕುಣಿಯುತ್ತಿರುವ ಸೂತ್ರದ ಗೊಂಬೆ. ಅದರಲ್ಲೊಂದು ಸಾಮಾಜಿಕ-ಸಾಂಸ್ಕೃತಿಕ-ಶೈಕ್ಷಣಿಕ ದಾರ.  ಅದನ್ನು ಸಂಘ ನಿಯಂತ್ರಿಸುತ್ತಿದ್ದರೆ, ಮತ್ತೊಂದು ನಮ್ಮ ದೇಶದ ಅತಿ ಶ್ರೀಮಂತ ಉದ್ಯಮಪತಿಗಳ ನಿಯಂತ್ರಣದಲ್ಲಿರುವ ಆರ್ಥಿಕ ದಾರ", ಎಂದು ತಿವಾರಿ ಬಿಜೆಪಿ ಸರ್ಕಾರವನ್ನು ಪರಿಹಾಸ್ಯ ಮಾಡಿದ್ದಾರೆ.  
 
ನಿನ್ನೆಯಿಂದ ಮೂರು ದಿನಗಳ ಕಾಲ ಬಿಜೆಪಿ ಹಾಗೂ ಆರ್‌ಎಸ್ಎಸ್ ನಡುವೆ ಸಮನ್ವಯ ಸಭೆ ನಡೆಯುತ್ತಿದ್ದು ಎನ್‌ಡಿಎ ಸರಕಾರದ ಒಂದು ವರ್ಷದ ಅವಧಿಯ ವಿಶ್ಲೇಷಣೆ, ಸರ್ಕಾರಕ್ಕೆ ಎದುರಾಗಿರುವ ಸಮಸ್ಯೆಗಳು, ಒಆರ್‌ಒಪಿ, ಪಟೇಲ್ ಸಮುದಾಯದ ಮೀಸಲಾತಿ ಹೋರಾಟ, ಧಾರ್ಮಿಕ ಪಂಗಡಗಳ ಜನಗಣತಿ ವಿಚಾರವಾಗಿ ಚರ್ಚೆಯಾಗುತ್ತಿದೆ.
 
ಬಿಜೆಪಿ ಮತ್ತು ಸಂಘದ ಹಿರಿಯ ನಾಯಕರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ