ಸಾರೇ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ: ಶಾಂತಿ ಕಾಪಾಡುವಂತೆ ದಾದ್ರಿ ಬಲಿಪಶು ಪುತ್ರನ ಮನವಿ

ಸೋಮವಾರ, 5 ಅಕ್ಟೋಬರ್ 2015 (16:34 IST)
ಮೊಹಮ್ಮದ್ ಅಖಲಕ್ ಹತ್ಯೆ ಪ್ರಕರಣವನ್ನು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿದ್ದರೆ ಮೃತನ ಪುತ್ರ ಸರ್ತಾಜ್ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
















'“ಸಾರೇ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ", ನಾವು ಈ ಹಾಡಿನ ಅರ್ಥವನ್ನು ಅರಿತುಕೊಂಡರೆ ಎಲ್ಲೆಡೆ ಶಾಂತಿ ನೆಲೆಯೂರುತ್ತದೆ', ಎಂದು ಸರ್ತಾಜ್ ಹೇಳಿದ್ದಾರೆ. 
 
ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಸರ್ತಾಜ್, ಈ ಮನವಿಯನ್ನು ಮಾಡಿಕೊಂಡಿದ್ದು, ಕ್ರೂರ ಘಟನೆಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿರುವ  ತನ್ನ ಸಹೋದರ ಡ್ಯಾನಿಶ್‌ಗಾಗಿ ಪ್ರಾರ್ಥನೆ ಸಲ್ಲಿಸುವಂತೆ  ಕೇಳಿಕೊಂಡಿದ್ದಾರೆ.
 
ಮೃತ ಅಖಲಖ್ ಕುಟುಂಬವನ್ನು ಭೇಟಿಯಾಗಲು ರಾಜಕಾರಣಿಗಳ ದಾದ್ರಿ ಗ್ರಾಮದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. 
 
ಏತನ್ಮಧ್ಯೆ, ಬಂಧಿತ ಆರೋಪಿಗಳಲ್ಲೊಬ್ಬನ ತಂದೆ ರಾಜಕಾರಣಿಗಳು ತಮ್ಮ ಗ್ರಾಮಕ್ಕೆ ಬರುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 
 
"ರಾಜಕಾರಣಿಗಳು ನೀಡುತ್ತಿರುವ ಹೇಳಿಕೆ ಮತ್ತು ಪರಷ್ಪರ ಆರೋಪ ಹೇರುತ್ತಿರುವುದು ಗ್ರಾಮದಲ್ಲಿ ಹಿಂಸೆಯನ್ನು ಹೆಚ್ಚಿಸುತ್ತಿದೆ. ಸಚಿವರು, ರಾಜಕಾರಣಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಬೇಕು. ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ಬಿಡಿ. ಆಗ ಹಿಂಸೆ ನಡೆಯಲಾರದು", ಎಂದು ಆರೋಪಿಗಳಲೊಬ್ಬನ ತಂದೆ ರಾಜೇಶ್ ರಾಣಾ ಮನವಿ ಮಾಡಿಕೊಂಡಿದ್ದಾರೆ. 
 
ದಾದ್ರಿ ಗ್ರಾಮದ ನಿವಾಲಿ ಮೊಹಮ್ಮದ್ ಅಖಲಖ್ ಗೋಮಾಂಸ ಸೇವಿಸಿದ್ದಾರೆ ಎಂದು ಆರೋಪಿಸಿ ಸುಮಾರು 200 ಜನರ ಗುಂಪು ಅವರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿತ್ತು. ಅಲ್ಲದೇ ಘಟನೆಯಲ್ಲಿ ಅವರ ಮಗನಿಗೆ ಗಂಭೀರವಾದ ಗಾಯಗಳಾಗಿದ್ದು, ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. 

ವೆಬ್ದುನಿಯಾವನ್ನು ಓದಿ