ಅತಂತ್ರ ಜಿಪಂ ಕ್ಷೇತ್ರಗಳಲ್ಲಿ ಮೈತ್ರಿ: ದೇವೇಗೌಡರನ್ನು ಭೇಟಿಯಾದ ಸಚಿವ ಸದಾನಂದಗೌಡ

ಗುರುವಾರ, 25 ಫೆಬ್ರವರಿ 2016 (20:06 IST)
ಕೇಂದ್ರ ಕಾನೂನು ಸಚಿವ ಬಿಜೆಪಿ ಮುಖಂಡ ಡಿ.ವಿ.ಸದಾನಂದಗೌಡ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಭೇಟಿ ಮಾಡಿ ಅತಂತ್ರ ಜಿಪಂ ಕ್ಷೇತ್ರಗಳಲ್ಲಿ ಮೈತ್ರಿ ಕುರಿತಂತೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ನವದೆಹಲಿಯಲ್ಲಿ ಇಂದು ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಮೈತ್ರಿ ಬಗ್ಗೆ ದೇವೇಗೌಡರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಿದ್ದಾರೆ.
 
ರಾಜ್ಯದ ಆರರಿಂದ ಎಂಟು ಜಿಪಂ ಕ್ಷೇತ್ರಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆಯದಿರುವ ಹಿನ್ನೆಲೆಯಲ್ಲಿ, ಅತಂತ್ರ ಸ್ಥಿತಿ ಎದುರಾಗಿದೆ. ಅತಂತ್ರವಾಗಿರುವ ಜಿಪಂ ಕ್ಷೇತ್ರಗಳಲ್ಲಿ ಜೆಡಿಎಸ್‌ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದೆ.
 
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅತಂತ್ರ ಜಿಪಂ ಕ್ಷೇತ್ರಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
 
ಆದರೆ, ಎಚ್‌.ಡಿ.ದೇವೇಗೌಡರು ಜೆಡಿಎಸ್ ಶಾಸಕರ, ಜಿಲ್ಲಾಧ್ಯಕ್ಷ್ರರ ಮತ್ತು ನೂತನವಾಗಿ ಆಯ್ಕೆಯಾದ ಜಿಪಂ ಸದಸ್ಯರೊಂದಿಗೆ ಚರ್ಚಿಸಿದ ನಂತರ ಮೈತ್ರಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಜೆಡಿಎಸ್ ವಕ್ತಾರರು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ