ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ಬಂಧನ

ಬುಧವಾರ, 7 ಅಕ್ಟೋಬರ್ 2015 (17:36 IST)
ನಿಷೇದಾಜ್ಞೆಯನ್ನು ಉಲ್ಲಂಘಿಸಿ ವಿವಾದಿತ ದಾದ್ರಿ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ ವಿಶ್ವ ಹಿಂದೂ ಪರಿಷತ್‌ ನಾಯಕಿ, ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಸಾಧ್ವಿ ಪ್ರಾಚಿ ಬಿಸಾಡಾಗಾಂವ ಹೊರ ವಲಯದಲ್ಲಿ ಬರುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗೋಮಾಂಸ ಭಕ್ಷಿಸಿದರೆಂಬ ಆರೋಪದ ಮೇಲೆ ಮುಸ್ಲಿಂ ವಯೋವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಬಳಿಕ ದಾದ್ರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ನಿಷೇಧಾಜ್ಞೆಯನ್ನು ಉಲ್ಲಂಘಿಸಿದರೆಂಬ ಕಾರಣಕ್ಕೆ ಪ್ರಾಚಿಯನ್ನು ಬಂಧಿಸಲಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ.
 
ತಮ್ಮ ಬಂಧನದಿಂದ ಕೆರಳಿರುವ ಪ್ರಾಚಿ, "ಮುಸ್ಲಿಂ ಮುಖಂಡ ಒವೈಸಿಗೆ ಪೊಲೀಸರು ತಡೆ ಒಡ್ಡುವುದಿಲ್ಲ. ನಮ್ಮ ಜತೆ ಮಾತ್ರ ಈ ರೀತಿ ನಡೆದುಕೊಳ್ಳುತ್ತಾರೆ", ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
 
'ಪೊಲೀಸರು ಸರ್ಕಾರದ ಕೈಗೊಂಬೆಯಂತೆ ಮತ್ತು ನಿರ್ದಿಷ್ಟ ಸಮುದಾಯದವರ ಪರ ವರ್ತಿಸುತ್ತಿದ್ದಾರೆ. ಬಿಸಾಡಾಗಾಂವ್ ಗ್ರಾಮದ ಹಿಂದೂ ಮುಖಂಡರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ', ಎಂದು ಪ್ರಾಚಿ ತಿಳಿಸಿದ್ದಾರೆ.
 
ಪ್ರಕರಣವನ್ನು ರಾಜಕೀಯಕರಣಗೊಳಿಸುತ್ತಿರುವುದಕ್ಕೆ ಬೇಸತ್ತಿರುವ ಎಂದು ಮೃತ ಅಖ್ಲಾಕ್‌ರ ಮಗ, ವಾಯು ಸೇನಾ ಸಿಬ್ಬಂದಿ ಸರ್ತಾಜ್, ಶಾಂತಿಯನ್ನು ಕಾಪಾಡಿ, ಘಟನೆಗೆ ರಾಜಕೀಯ ಬಣ್ಣ ನೀಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ