ಯಾಕೂಬ್ ಪತ್ನಿಗೆ ರಾಜ್ಯಸಭಾ ಸದಸ್ಯತ್ವ ನೀಡಬೇಕಂತೆ!

ಶನಿವಾರ, 1 ಆಗಸ್ಟ್ 2015 (16:56 IST)
ಮೊನ್ನೆ ಗಲ್ಲಿಗೇರಿಸಲ್ಪಟ್ಟ ಉಗ್ರ ಯಾಕೂಬ್ ಮೆಮೊನ್ ಪತ್ನಿಗೆ ರಾಜ್ಯಸಭೆ ಸದಸ್ಯತ್ವ ನೀಡಬೇಕಂತೆ. ಈ ಬೇಡಿಕೆಯನ್ನಿಟ್ಟಿದ್ದು ಪಕ್ಷವೊಂದರ ನಾಯಕನೆಂಬುದು ದೊಡ್ಡ ವಿಪರ್ಯಾಸ.  1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಉಗ್ರ ಯಾಕೂಬ್ ಮೆಮೊನ್‌ ಪತ್ನಿ ರಹೀನ್‌‌ನನ್ನು ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂದು ತಮ್ಮ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದ  ಸಮಾಜವಾದಿ ಪಕ್ಷದ ನಾಯಕರೊಬ್ಬರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.

ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಮೊಹಮದ್ ಫರೂಖ್ ಘೋಸಿ ಈ ಅಸಂಬದ್ಧ ಬೇಡಿಕೆಯನ್ನಿಟ್ಟ ಮಹಾತ್ಮ!
 
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಅವರಿಗೆ ಪತ್ರ ಬರೆದು ಯಾಕೂಬ್ ಪತ್ನಿಯನ್ನು ರಾಜ್ಯಸಭೆಗೆ ಕಳುಹಿಸಬೇಕೆಂದು ಆತ ಆಗ್ರಹಿಸಿದ್ದಾನೆ. ಪರಿಣಾಮ ಪಕ್ಷದಿಂದ ಆತನನ್ನು ಹೊರ ಹಾಕಲಾಗಿದೆ.
 
ತಾನು ಮಾಡಿದ ತಪ್ಪು ಭಾರೀ ವಿವಾದಕ್ಕೆ ಎಡೆಯಾದಾಗ ಆತ ಪತ್ರದಲ್ಲಿರುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಪತ್ರ ಬರೆಯುವ ಮುನ್ನ ನಾನು ಪಕ್ಷದ ಯಾವುದೇ ಮುಖಂಡರನ್ನು ಸಂಪರ್ಕಿಸಿರಲಿಲ್ಲವೆಂದಿದ್ದಾನೆ. 
 
ಮೆಮೊನ್‌ಗೆ ಗಲ್ಲು ನೀಡಿದ ಎರಡು ದಿನಗಳ ಬಳಿಕ ಮುಲಾಯಂಗೆ ಆತ ಪತ್ರ ಬರೆದಿದ್ದು, ಅದರಲ್ಲಿ ಮೆಮೊನ್ ಪತ್ನಿ ಅಸಹಾಯಕಳಾಗಿದ್ದಾಳೆ ಎಂದು ಕಳವಳ ವ್ಯಕ್ತ ಪಡಿಸಿದ್ದಾನೆ. 
 
ರಹೀನ್ ಹಲವು ವರ್ಷಗಳಿಂದ ಜೈಲಿನಲ್ಲಿದ್ದಳು.  ಆಕೆ ಎಷ್ಟೊಂದು ನೋವನ್ನು ತಿಂದಿರಲಿಕ್ಕಿಲ್ಲ? ಇಂದಾಕೆ ಅಸಹಾಯಕಳಾಗಿದ್ದಾಳೆ. ಅವಳಂತೆ ಭಾರತದಲ್ಲಿ  ಇಂತಹ ಅಸಂಖ್ಯ ಸಂಖ್ಯೆಯ ಮುಸ್ಲಿಂಮರು ಅಸಹಾಯಕತೆ ಭಾವದಲ್ಲಿದ್ದು, ತಮ್ಮ ಪರ ಹೋರಾಡುವವರು ಯಾರು ಎಂದು ಎದುರು ನೋಡುತ್ತಿದ್ದಾರೆ. ಆದ್ದರಿಂದ ರಹೀನ್‌ನನ್ನು  ರಾಜ್ಯಸಭೆ ಸದಸ್ಯಳನ್ನಾಗಿ  ದುರ್ಬಲ ಮತ್ತು ಅಸಹಾಯಕರ  ಪಾಲಿನ ಧ್ವನಿಯಾಗಲು ಅವಕಾಸ ನೀಡಬೇಕು ಎಂದು ಘೋಸಿ ಪತ್ರದಲ್ಲಿ ಬರೆದಿದ್ದಾನೆ. 

ವೆಬ್ದುನಿಯಾವನ್ನು ಓದಿ