ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಲು ಸಮಾಜವಾದಿ ಪಕ್ಷ ಸಿದ್ಧ: ಶಿವಪಾಲ್ ಯಾದವ್

ಸೋಮವಾರ, 12 ಅಕ್ಟೋಬರ್ 2015 (20:52 IST)
ಮುಂಬರುವ 2017ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿರುವ ಸಮಾಜವಾದಿ ಪಕ್ಷ, 403 ಸದಸ್ಯ ಬಲದ ವಿಧಾನಸಭೆಯಲ್ಲಿ 172 ವಿಧಾನಸಭೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದು ಹೇಳಿದೆ. 
 
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಗೆಲುವಿಗಾಗಿ ಶ್ರಮಿಸಲು ಹೆಚ್ಚಿನ ಸಮಯ ದೊರೆಯುವಂತಾಗಲು ಮುಂಗಡವಾಗಿಯೇ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗುವುದು ಎಂದು ಪಕ್ಷದ ಹಿರಿಯ ನಾಯಕ ಶಿವಪಾಲ್ ಯಾದವ್ ತಿಳಿಸಿದ್ದಾರೆ.
 
ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು ಪಟ್ಟಿಯನ್ನು ಪಕ್ಷದ ಸಂಸದೀಯ ಮಂಡಳಿಗೆ ಶಿಫಾರಸ್ಸಿಗಾಗಿ ಕಳುಹಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣೆಗೆ ಒಂದು ವರ್ಷ ಮುಂಚಿತವಾಗಿಯೇ ಘೋಷಿಸಲಾಗುವುದು. ಇದರಿಂದ ಬೇರುಮಟ್ಟದಿಂದ ಮತದಾರರನ್ನು ಭೇಟಿ ಮಾಡಲು ಅಭ್ಯರ್ಥಿಗಳಿಗೆ ಸಮಯಾವಕಾಶ ದೊರೆತಂತಾಗುತ್ತದೆ ಎಂದು ಹೇಳಿದ್ದಾರೆ.  
 
ಕಳೆದ 2012ರಲ್ಲಿ ಸಮಾಜವಾದಿ ಪಕ್ಷ 224 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ತನ್ನ ಬಲವನ್ನು 231 ಕ್ಕೆ ಹೆಚ್ಚಿಸಿಕೊಂಡಿತ್ತು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಕೇವಲ 5 ರಲ್ಲಿ ಜಯಗಳಿಸಿತ್ತು. ಬಿಜೆಪಿ 73 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
 
ಉತ್ತರಪ್ರದೇಶದ ಜನತೆಗೆ ವಾಸ್ತವತೆಯ ಅರಿವಿರುವುದರಿಂದ ಬಿಜೆಪಿಯ ಕೋಮುವಾದದ ರಾಜಕಾರಣ ನಡೆಯುವುದಿಲ್ಲ ಎಂದು ಸಚಿವ ಶಿವಪಾಲ್ ಯಾದವ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ