ಸಂಜಯ್ ದತ್‌ಗೆ ಪದೆಪದೇ ಪೆರೋಲ್: ತನಿಖೆಗೆ ಗೃಹ ಸಚಿವಾಲಯ ಆದೇಶ

ಶುಕ್ರವಾರ, 26 ಡಿಸೆಂಬರ್ 2014 (18:45 IST)
ಪೆರೋಲ್ ಮೇಲೆ ಬಿಡುಗಡೆಯಾಗಿ ಕುಟುಂಬದೊಂದಿಗೆ 'ಪೀಕೆ' ನೋಡಿ ಖುಷಿಖುಷಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್‌ಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ.
 
ಸಂಜಯ್ ದತ್‌ಗೆ ಪದೆಪದೇ ಪೆರೋಲ್ ನೀಡುತ್ತಿರುವ ಜೈಲು ಅಧಿಕಾರಿಗಳ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ಇದೀಗ ದತ್ ಪೆರೋಲ್ ಪ್ರಕರಣದ ಕುರಿತು ತನಿಖೆ ಮಾಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
 
42 ತಿಂಗಳು ಜೈಲು ಶಿಕ್ಷೆಗೆ ಒಳಗಾಗಿರುವ ಸಂಜಯ್ ದತ್ ಅವರನ್ನು 14 ದಿನಗಳ ಪೆರೋಲ್ ಮೇಲೆ ಡಿಸೆಂಬರ್ 25ರಂದು ಬಿಡುಗಡೆ ಮಾಡಲಾಗಿತ್ತು. ಹೊರಗಡೆ ಬಂದ ಬಳಿಕ ವರದಿಗಾರರಿಗೆ ಪ್ರತಿಕ್ರಿಯಿಸಿದ ದತ್, ಪೆರೋಲ್ ಪಡೆಯುವುದು ಪ್ರತಿಯೊಬ್ಬ ಖೈದಿಯ ಹಕ್ಕು ಮತ್ತು ಅದನ್ನು ನಾನು ಪಡೆದುಕೊಂಡಿದ್ದೆನೆ. ಪ್ರತಿವರ್ಷ ಖೈದಿಗಳಿಗೆ ಪೆರೋಲ್ ನೀಡಲಾಗುತ್ತದೆ. ಹೀಗಾಗಿ ನನಗೂ ಸಿಕ್ಕಿದೆ ಎಂದು ಹೇಳಿದ್ದರು.
 
1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಸಂಜಯ್ ದತ್ ಅವರು ಪತ್ನಿ ಮಾನ್ಯತಾಳ ಅನಾರೋಗ್ಯದ ನೆಪ ಹೇಳಿ 2013ರ ಡಿ.21ರಂದು ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ನಂತರ ಮತ್ತೆ 2 ಬಾರಿ ಪೆರೋಲ್ ವಿಸ್ತರಿಸುವಂತೆ ಅರ್ಜಿ ಹಾಕಿದ್ದರು. ಹೀಗೆ ಒಟ್ಟು 3 ತಿಂಗಳ ಕಾಲ ಪೆರೋಲ್‌ನಲ್ಲಿ ಹೊರಗಿದ್ದರು.

ವೆಬ್ದುನಿಯಾವನ್ನು ಓದಿ