ಹಜ್ ಕಾಲ್ತುಳಿತ: ಮೃತ ಭಾರತೀಯರ ಸಂಖ್ಯೆ 74ಕ್ಕೆ ಏರಿಕೆ

ಮಂಗಳವಾರ, 6 ಅಕ್ಟೋಬರ್ 2015 (11:25 IST)
ಸೌದಿ ಅರೇಬಿಯದಲ್ಲಿ ಹಜ್‌ ಯಾತ್ರೆ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಭಾರತೀಯರ ಸಂಖ್ಯೆ 74ಕ್ಕೇರಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ತಿಳಿಸಿದ್ದಾರೆ.

ಇದೇ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿರುವವರ ಸಂಖ್ಯೆ 1,100 ದಾಟಿದೆ ಎಂದು ತಿಳಿದು ಬಂದಿದೆ.ಸ್ವರಾಜ್ ತಮ್ಮ ಟ್ವಿಟರ್ ಅಕೌಂಟ್​ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಸಾವನ್ನಪ್ಪಿರುವ ಭಾರತೀಯರ ಸಂಖ್ಯೆ 74ಕ್ಕೇರಿದ್ದು, ಗಾಯಗೊಂಡವರಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. 
 
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೆಕ್ಕಾದ ಪ್ರಮುಖ ಮಸೀದಿಯಿಂದ ಸುಮಾರು 7 ಕಿ.ಮೀ. ದೂರವಿರುವ ಮೀನಾದಲ್ಲಿ ಹಜ್ ಯಾತ್ರೆಯ ಅಂತಿಮ ಆಚರಣೆಯಾದ ಸೈತಾನನಿಗೆ ಕಲ್ಲು ಹೊಡೆಯುವ ಪ್ರಕ್ರಿಯೆ ವೇಳೆ ನೂಕುನುಗ್ಗಲು ನಡೆದು ಈ ಘಟನೆ ಸಂಭವಿಸಿತ್ತು. ಇದು ಹಜ್‍ನ ಇತಿಹಾಸದಲ್ಲೇ ನಡೆದ ಎರಡನೇ ಅತಿ ಭೀಕರ ದುರಂತವಾಗಿದೆ. 1990ರಲ್ಲಿ ನಡೆದ ಕಾಲ್ತುಳಿತಕ್ಕೆ 1,426 ಮಂದಿ  ಮೃತಪಟ್ಟಿದ್ದರು. ಕಳೆದ ತಿಂಗಳ ಆರಂಭದಲ್ಲಿ ಬೃಹತ್ ಕ್ರೇನ್ ವೊಂದು ಮೆಕ್ಕಾ ಮಸೀದಿ ಮೇಲೆ ಕುಸಿದು ಬಿದ್ದು 107 ಮಂದಿ ಸಾವಿಗೀಡಾಗಿದ್ದರು.

ವೆಬ್ದುನಿಯಾವನ್ನು ಓದಿ