ಚಾಯ್‌ವಾಲಾ ವೆಬ್ ಡೆವಲಪರ್ ಆಗಿ ಬೆಳೆದ ಯಶೋಗಾಥೆ

ಬುಧವಾರ, 8 ಏಪ್ರಿಲ್ 2015 (14:43 IST)
ಚಹಾ ಮಾರಿ ಬದುಕು ಸಾಧಿಸುತ್ತಿದ್ದ ಬಾಲಕನೊಬ್ಬ ಕಠಿಣ ಪರಿಶ್ರಮದಿಂದ ವೆಬ್ ಡೆವಲಪರ್ ಆಗಿ ಯಶಸ್ಸು ಸಾಧಿಸಿದ್ದಾನೆ. ಈ ಮೂಲಕ ಬಡತನ ಸಾಧನೆಗೆ ಅಡ್ಡಿ ಅಲ್ಲ ಎಂಬುದನ್ನು ಸಾರಿ ಹೇಳುತ್ತಿದ್ದಾನೆ. 

ಬಿಹಾರದ ನಿವಾಸಿಯಾಗಿದ್ದ ರಾಜು ಯಾದವ್ ಎಂಬ 13 ವರ್ಷದ ಬಾಲಕ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದ್ದುದರಿಂದ 2003ರಲ್ಲಿ ಮನೆ ಬಿಟ್ಟು ಮುಂಬೈ ಸೇರಿದ್ದ. ವಾಣಿಜ್ಯ ನಗರಿಯಲ್ಲಿ ಟಾಕ್ಸಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಬಂಧಿಕರೊಬ್ಬರ ಮನೆಯಲ್ಲಿ ಆತ ಆಶ್ರಯ ಪಡೆದಿದ್ದ. 
 
ದಕ್ಷಿಣ ಮುಂಬೈನ ಚಿತ್ರ ಬಜಾರ್‌ನಲ್ಲಿ‌, ಕೆಲವು ಆಫೀಸ್‌ಗಳಿಗೆ ಚಹಾ ಡೆಲಿವರಿ ಮಾಡುವ ಕೆಲಸವನ್ನು ಆತ ಗಿಟ್ಟಿಸಿಕೊಂಡ. ನಂತರ ಆತ ಮ್ಯಾರೆಜ್ ವೆಬ್ ಪೋರ್ಟಲ್ ಒಂದರಲ್ಲಿ ಅಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ. ಆ ಸಮಯದಲ್ಲಿ ಆತ ಆರನೇ ತರಗತಿಯಲ್ಲಿ ಬಿಟ್ಟಿದ್ದ ತನ್ನ ಓದನ್ನು ಮುಂದುವರೆಯಲು ನಿರ್ಧರಿಸಿದ. ತನ್ನ ಊರಿಗೆ ಹೋಗಿ ಅಲ್ಲಿನ ಹೈಸ್ಕೂಲ್‌ನಲ್ಲಿ 10 ನೇ ತರಗತಿ ಪರೀಕ್ಷೆಯನ್ನು ಬಾಹ್ಯವಾಗಿ ಕಟ್ಟಿದ ಆತ ಬಿಡುವಿನ ಸಮಯದಲ್ಲಿ ಓದತೊಡಗಿದ. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸಹ ದೂರ ಶಿಕ್ಷಣದ ಮೂಲಕ ಪಾಸ್ ಮಾಡಿದ ಈತ ಈಗ ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ.ಕಾಂನ್ನು ಓದುತ್ತಿದ್ದಾನೆ. 
 
ತಾನು ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ  ಮೆಟ್ರಿಮೋನಿಯಲ್ ಪೋರ್ಟಲ್ ಶಾದಿ.ಕಾಮ್‌ನಲ್ಲಿ ವೆಬ್ ಡೆವಲಪರ್ ಆಗಿದ್ದಾನೆ.
 
ಕೆಲವರು ಆತನನ್ನು  ರಾಜು ಬನ್ ಗಯಾ ಜಂಟಲ್‌ಮನ್ ಎಂದು ಕರೆದರೆ. ರಾಜು ಎನ್ನುತ್ತಾನೆ ಇದು ಕೇವಲ "ಪ್ರಾರಂಭ, ನಾನಿನ್ನು ಅತಿ ದೂರ ಸಾಗಬೇಕಿದೆ". 
 
ರಾಜು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ. 

ವೆಬ್ದುನಿಯಾವನ್ನು ಓದಿ