ಅಕ್ರಮ ಆಸ್ತಿ ಪ್ರಕರಣ: ನವೆಂಬರ್ 23 ರಂದು ಸುಪ್ರೀಂನಲ್ಲಿ ಜಯಲಲಿತಾ ವಿರುದ್ಧದ ಮೇಲ್ಮನವಿ ಅರ್ಜಿ ವಿಚಾರಣೆ

ಮಂಗಳವಾರ, 13 ಅಕ್ಟೋಬರ್ 2015 (20:21 IST)
ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನವೆಂಬರ್ 23 ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಪ್ರಕಟಿಸಿದೆ.
 
ಜಯಲಲಿತಾ ಸಲ್ಲಿಸಿದ ಅರ್ಜಿಗೆ ಪ್ರತ್ಯುತ್ತರವಾಗಿ ದಾಖಲೆಗಳನ್ನು ಮಂಡಿಸಲು ಕರ್ನಾಟಕ ಸರಕಾರ ಆರು ವಾರಗಳ ಸಮಯವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನವೆಂಬರ್ 23 ಕ್ಕೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಸೆ ಮತ್ತು ಆರ್‌.ಕೆ.ಅಗರ್‌ವಾಲ್ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.
 
ಜಯಲಲಿತಾ ಹೊರತುಪಡಿಸಿ, ಇತರ ಆರೋಪಿಗಳಾದ ಎನ್.ಸಸಿಕಲಾ, ವಿ.ಎನ್.ಸುಧಾಕರನ್ ಮತ್ತು ಜೆ.ಇಳವರಿಸಿಯವರಿಗೆ ಕೂಡಾ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಸಿಕಲಾ ಜಯಲಲಿತಾ ಅವರಿಗೆ ಆತ್ಮಿಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಡಿಎಂಕೆ ನಾಯಕ ಅನ್ಬಳಗನ್ ಮತ್ತು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿಯವರಿಗೂ ಕೂಡಾ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸುಪ್ರೀಂ ತಿಳಿಸಿದೆ. 
 
ಕಳೆದ 2014ರಲ್ಲಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾ ವಿರುದ್ಧ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ನಾಲ್ಕು ವರ್ಷಗಳ ಶಿಕ್ಷೆಯನ್ನು ವಿಧಿಸಿದ್ದಲ್ಲದೇ 100 ಕೋಟಿ ರೂಪಾಯಿಗಳ ದಂಡವನ್ನು ಹೇರಿತ್ತು. ಆದರೆ, ಹೈಕೋರ್ಟ್ ಜಯಾ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು.  

ವೆಬ್ದುನಿಯಾವನ್ನು ಓದಿ