ವಿದ್ಯಾರ್ಥಿಗಳ ಸಾವು: ಪ್ರಾಚಾರ್ಯರನ್ನೇ ಥಳಿಸಿ ಕೊಂದ ಉದ್ರಿಕ್ತ ಜನರು

ಸೋಮವಾರ, 29 ಜೂನ್ 2015 (11:56 IST)
ಶಾಲೆಯೊಂದರ ಪ್ರಾಚಾರ್ಯರನ್ನು ಸಾರ್ವಜನಿಕರು ಮನ ಬಂದಂತೆ ಥಳಿಸಿ ಕೊಲೆಗೈದ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ  ಭಾನುವಾರ ನಡೆದಿದೆ. 

ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಾದ ರವಿಕುಮಾರ್ (7) ಮತ್ತು ಸಾಗರ್ (8) ಬಾವಿಯೊಂದರಲ್ಲಿ ಈಜಲು ಹೋಗಿ  ಸಾವನ್ನಪ್ಪಿದ್ದರು. ಈ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಮಕ್ಕಳ ಸಾವಿಗೆ ಪ್ರಾಚಾರ್ಯರೇ ಕಾರಣ ಎಂದು ಆರೋಪಿಸಿದ
ಉದ್ರಿಕ್ತ ಜನರು ಈ ದುಷ್ಕೃತ್ಯವನ್ನೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಜನರ ದಾಳಿಯಿಂದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರಾಚಾರ್ಯ ದೇವೇಂದ್ರ ಪ್ರಸಾದ್ ಚಿಕಿತ್ಸೆಗೆ ಸ್ಪಂದಿಸದೇ ಪಾಟ್ನಾ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಲಂದಾದ ಪೊಲೀಸ್ ಅಧೀಕ್ಷಕರಾದ ಸಿದ್ಧಾರ್ಥ ಮೋಹನ್  ಜೈನ್ ಹೇಳಿದ್ದಾರೆ. 
 
ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 
 
ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯಾವಳಿಗಳು ಜನರು ಅವರನ್ನು ಕ್ರೂರವಾಗಿ ಥಳಿಸಿದ್ದಕ್ಕೆ ಸಾಕ್ಷಿಯಾಗಿದೆ. ಕೆಲವು ದೊಣ್ಣೆಗಳಿಂದ ಬಡಿದರೆ ಮತ್ತೆ ಕೆಲವು ಬೋರಲಾಗಿ ಬಿದ್ದಿದ್ದ ಅವರನ್ನು ಭೀಕರವಾಗಿ ಒದ್ದಿದ್ದಾರೆ. 
 
ಪ್ರಕರಣದ ಕುರಿತು ಗಂಭೀರವಾದ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಈ ಎರಡು ದುರ್ಘಟನೆಗಳ ಹಿನ್ನೆಲೆಯಲ್ಲಿ ನಳಂದದ ಹಿಲ್ಸಾ ಏರಿಯಾದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. 

ವೆಬ್ದುನಿಯಾವನ್ನು ಓದಿ