ಭಾರತದ ಶಾಲೆಗಳ ಮೇಲೂ ಉಗ್ರರ ಕಣ್ಣು!

ಗುರುವಾರ, 18 ಡಿಸೆಂಬರ್ 2014 (12:45 IST)
ನೆರೆಯ ಪಾಕಿಸ್ತಾನದ ಪೇಶಾವರದಲ್ಲಿ ಮಂಗಳವಾರ ಸೈನಿಕ ಶಾಲೆಯಲ್ಲಿ ನಡೆದ ತಾಲಿಬಾನ್​ ಉಗ್ರರ ಭೀಕರ ದಾಳಿಯಂತೆ ಭಾರತದಲ್ಲಿಯೂ ಇದೇ ಮಾದರಿಯಲ್ಲಿ ದಾಳಿ ನಡೆಸಲು ಲಷ್ಕರ್ ಉಗ್ರರು ಯೋಜನೆ​ ರೂಪಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. 
ಈ ಹಿನ್ನೆಲೆಯಲ್ಲಿ ಕಾರ್ಯತತ್ಪರವಾಗಿರುವ ಕೇಂದ್ರ ಸರ್ಕಾರ ದೇಶದ ಎಲ್ಲಾ ಶಾಲಾ -ಕಾಲೇಜುಗಳಿಗೆ ಭದ್ರತಾ ದೃಷ್ಟಿಯಿಂದ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆ. 
 
ಶಾಲೆಗಳಲ್ಲಿನ ಪ್ರವೇಶ ದ್ವಾರ ಮತ್ತು ತರಗತಿಯ ಬಾಗಿಲುಗಳು ಗಟ್ಟಿಯಾಗಿರಬೇಕು. ಅಪಾಯ ಎದುರಾದರೆ ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ಎಚ್ಚರಿಸಲು ಆಲಾರಂ ವ್ಯವಸ್ಥೆ ಮಾಡಿರಬೇಕು ಎಂದು ಮಾರ್ಗ ಸೂತ್ರಗಳಲ್ಲಿ ತಿಳಿಸಲಾಗಿದೆ. 
 
ಅದರಲ್ಲೂ ದೇಶದಲ್ಲಿರುವ ಸೈನಿಕ ಶಾಲೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅತಿ ಹೆಚ್ಚು ಅಪಾಯದ ಭೀತಿ ಇರುವ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರದಲ್ಲಿರುವ ಸೈನಿಕ ಶಾಲೆಗಳಿಗೆ ,ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
 
ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಪ್ರಾಚಾರ್ಯರು, ಮುಖ್ಯಸ್ಥರ ಜತೆ ಸಂಪರ್ಕದಲ್ಲಿದ್ದು, ಭದ್ರತೆ ಕುರಿತಂತೆ ನಿಗಾ ವಹಿಸಬೇಕೆಂದು ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ