ದ್ರವ ದಹನ ಪರೀಕ್ಷೆ ಯಶಸ್ವಿ, ಮಂಗಳ ಕಕ್ಷೆಗೆ ಕ್ಷಣಗಣನೆ

ಸೋಮವಾರ, 22 ಸೆಪ್ಟಂಬರ್ 2014 (14:56 IST)
ಮಂಗಳಯಾನ ನೌಕೆ ಮಂಗಳನ ಕಕ್ಷೆ ಸೇರುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 24ರಂದು ನೌಕೆ ಮಂಗಳನ ಕಕ್ಷೆ ಸೇರಲಿದೆ.  300 ದಿನದಿಂದ ನಿಷ್ಕ್ರಿಯವಾಗಿದ್ದ ಇಂಜಿನ್‌ ಪರೀಕ್ಷಾರ್ಥ ಚಾಲನೆ ಮಾಡಲಾಗಿದ್ದು, ಈ ಪರೀಕ್ಷೆಯಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. 
 
ಭಾರತದ ವಿಜ್ಞಾನ ಸಮುದಾಯ ಉಸಿರುಬಿಗಿ ಹಿಡಿದು ಸೆ.24ರಂದು ಮಂಗಳಯಾನ ನೌಕೆ ಕೆಂಪು ಗ್ರಹದ ಕಕ್ಷೆಗೆ ಪ್ರವೇಶ ಪಡೆಯುವುದನ್ನು ವೀಕ್ಷಿಸುವುದಕ್ಕೆ ಕಾಯುತ್ತಿದ್ದಾರೆ. ಗಗನನೌಕೆ ಈ ಗುರಿಯಲ್ಲಿ ಯಶಸ್ವಿಯಾದರೆ ಅಮೆರಿಕ, ರಷ್ಯಾ ಮತ್ತು ಯುರೋಪ್ ನಂತರ ಕೆಂಪು ಗ್ರಹವನ್ನು ತಲುಪಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. 
 
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮಧ್ಯಾಹ್ನ ನೌಕೆಯ ಮುಖ್ಯ ದ್ರವ ಎಂಜಿನ್‌ನನ್ನು ನಾಲ್ಕು ಸೆಕೆಂಡ್‌ಗಳ ಕಾಲ ಉರಿಸಿದರು.  ನೌಕೆಯ 440 ನ್ಯೂಟನ್ ಲಿಕ್ವಿಡ್ ಅಪೋಜಿ ಮೋಟರ್ ಎಂಜಿನ್ 4 ಸೆಕೆಂಡುಗಳ ಕಾಲ ಉರಿಸುವುದಕ್ಕೆ ಅರ್ಧ ಕೆಜಿ ಇಂಧನ ಅಗತ್ಯವಾಗುತ್ತದೆ.

ಈ ಇಂಜಿನ್ ಪರೀಕ್ಷೆ ಯಶಸ್ವಿಯಾಗಿದ್ದು, ಸೆ. 24ರಂದು 8 ತ್ರಸ್ಟರ್‌ಗಳ ಜೊತೆ ಈ ಇಂಜಿನ್ ಕಾರ್ಯಾಚರಣೆಗೆ ಇಳಿದು ಮಂಗಳಯಾನದ ವೇಗವನ್ನು ತಗ್ಗಿಸಲಾಗುತ್ತದೆ. ಇದರಿಂದ ಮಂಗಳ ಕಕ್ಷೆಗೆ ನೌಕೆಯನ್ನು ಬುಧವಾರ ಯಶಸ್ವಿಯಾಗಿ ತರಲು ಸಾಧ್ಯವಾಗುತ್ತದೆ. 

ವೆಬ್ದುನಿಯಾವನ್ನು ಓದಿ