ಜಯಾ ಬಿಡುಗಡೆ ಹಿನ್ನೆಲೆ: ಪೊಲೀಸ್ ಬಿಗಿ ಭದ್ರತೆ

ಶನಿವಾರ, 18 ಅಕ್ಟೋಬರ್ 2014 (10:21 IST)
ಇಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದು, ಜೈಲಿನ ಸುತ್ತಮುತ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.


 
ಪರಪ್ಪನ ಅಗ್ರಹಾರದ ಸುತ್ತಮುತ್ತ 1 ಕೀಮಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು, ಪೊಲೀಸ್ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸ್ಥಳದಲ್ಲಿ 6 ಡಿಸಿಪಿ, 15 ಎಸಿಪಿ, 45 ಇನ್ಸಪೆಕ್ಟರ್, 20 ಕೆಎಸ್ಆರ್‌ಸಿಪಿ , 20 ಸಿಎಆರ್ ತುಕಡಿ, ಕಮಾಂಡರ್ಸ್ ಸ್ಕ್ವಾಡ್,  ವಾಟರ್ ಜೆಟ್, ಒಂದುವರೆ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಥಳದಲ್ಲಿ ಹಾಜರಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ 20 ಬಿಎಂಟಿಸಿ ಬಸ್‌ಗಳನ್ನು ಸ್ಥಳದಲ್ಲಿ ನಿಲ್ಲಿಸಲಾಗಿದೆ. 
 
ತಮಿಳುನಾಡು ಗಡಿಯಲ್ಲಿ ಕೂಡ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜಯಾ ಬಿಡುಗಡೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಜಯಾ ಬೆಂಬಲಿಗರ ವಾಹನಗಳನ್ನು ಅತ್ತಿಬೆಲೆ ಜಂಕ್ಸನ್‌ನಲ್ಲಿ ತಡೆದು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಓರ್ವ ಡಿಸಿಪಿ, 10 ಪೊಲೀಸ್ ಇನ್ಸಪೆಕ್ಟರ್ ಮತ್ತು 200 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಅವಶ್ಯಕ ಬಂದೋಬಸ್ತ ಕೈಗೊಳ್ಳಲಾಗಿದೆ. 
 
ಬಿಡುಗಡೆಯಾಗುತ್ತಿರುವ ಜಯಾ  ಭದ್ರತೆಗಾಗಿ ಎಸ್ಕಾರ್ಟ್ ವಾಹನಗಳು ಜೈಲಿನ ಹೊರಗಡೆ ಕಾದು ನಿಂತಿವೆ. ಝಡ್ ಪ್ಲಸ್ ಭದ್ರತೆಯಲ್ಲಿ ಎಸ್ಕಾರ್ಟ್ ವಾಹನದಲ್ಲಿ  ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅವರು ವಿಶೇಷ ವಿಮಾನದಲ್ಲಿ ತಮಿಳುನಾಡಿಗೆ ವಾಪಸ್ಸಾಗಲಿದ್ದಾರೆ. 

ವೆಬ್ದುನಿಯಾವನ್ನು ಓದಿ