ಜೇಟ್ಲಿ ಪರ ಬ್ಯಾಟ್ ಬೀಸಿದ ಸೆಹ್ವಾಗ್, ಗಂಭೀರ್

ಭಾನುವಾರ, 20 ಡಿಸೆಂಬರ್ 2015 (17:04 IST)
ದೆಹಲಿ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪರ ಕ್ರಿಕೆಟ್ ಸ್ಟಾರ್‌ಗಳಾದ ಗೌತಮ್ ಗಂಭೀರ್ ಹಾಗೂ ವಿರೇಂದ್ರ ಸೆಹ್ವಾಗ್ ಬ್ಯಾಟ್ ಬೀಸಿದ್ದಾರೆ.
ದೆಹಲಿ ಕ್ರಿಕೆಟ್ ಸಂಸ್ಥೆಯನ್ನು ಈ ಮಟ್ಟಕ್ಕೆ ಎತ್ತರಿಸುವುದರಲ್ಲಿ ಜೇಟ್ಲಿ ಅವರ ಪರಿಶ್ರಮ ಪ್ರಮುಖವಾಗಿದ್ದು, ಎಲ್ಲಾ ತಪ್ಪುಗಳಿಗೆ ಅವರನ್ನು ಹೊಣೆಯಾಗಿಸುವುದು ಸರ್ವಥಾ ಸರಿಯಲ್ಲ ಎಂದು ಆಟಗಾರರು ಜೇಟ್ಲಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
 
ಜೇಟ್ಲಿ ಅವರನ್ನು ಬೆಂಬಲಿಸಿ ಸೆಹ್ವಾಗ್, ಅರುಣ್‌ ಜೇಟ್ಲಿ ಅಧ್ಯಕ್ಷರಾಗಿದ್ದ ವೇಳೆ ಡಿಡಿಸಿಎದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಅವರು ಎಲ್ಲ ಕ್ರಿಕೆಟಿಗರಿಗೂ ನ್ಯಾಯ ಒದಗಿಸಿದ್ದಾರೆ. ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಯಾವುದೇ ಆಟಗಾರರಿಗೂ ಸಮಸ್ಯೆಯಿದ್ದರೂ ತಕ್ಷಣ ಜೇಟ್ಲಿ ಸ್ಪಂದಿಸುತ್ತಿದ್ದರು  ಎಂದು ಟ್ವೀಟ್‌ ಮಾಡಿದ್ದಾರೆ. 
 
ಸೆಹವಾಗ್ ಅವರ ಸಹೋದ್ಯೋಗಿ ಬ್ಯಾಟ್ಸ‌ಮನ್ ಗಂಭೀರ್ ಕೂಡ ಜೇಟ್ಲಿ ಅವರನ್ನು ಜೇಟ್ಲಿ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ತೆರಿಗೆದಾರರ ಹಣ ಬಳಸದೇ ದೆಹಲಿಗೆ ಒಂದು ಉತ್ತಮ ಸ್ಟೇಡಿಯಂ ನೀಡಿದ ವ್ಯಕ್ತಿ ಅರುಣ್ ಜೇಟ್ಲಿ. ಮಾಜಿ ಆಟಗಾರರು ಜೇಟ್ಲಿ ಅವರನ್ನು ದೂರುತ್ತಿರುವುದು ಆಘಾತ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
 
ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಜೇಟ್ಲಿ ಅವರ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.  ಆಪ್ ಪಕ್ಷ ಮೊದಲು ಈ ಆರೋಪವನ್ನು ಹೊರಿಸಿದ್ದು, ಮಾಜಿ ಕ್ರಿಕೆಟಿಗ ಹಾಗೂ ಜೇಟ್ಲಿ ಅವರ ಪಕ್ಷದವರೇ ಆದ ಕೀರ್ತಿ ಅಜಾದ್ ಕೂಡ ಜೇಟ್ಲಿ ವಿರುದ್ಧ ಧ್ವನಿ ಎತ್ತಿದ್ದು ಇಂದು ಈ ಕುರಿತ ಸಾಕ್ಷ್ಯವನ್ನು ಸಹ ಬಿಡುಗಡೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ